ಉದಯವಾಣಿ ಸಮಾಚಾರ
ಸಿಂಧನೂರು: ಡಂಗುರ ಹಾಕಿಸಿ ಮನೆ ಬಾಗಿಲಿಗೂ ಹೋದಾಗಲೂ ಕೆಲವೊಮ್ಮೆ ನಿರೀಕ್ಷಿತ ಸ್ಪಂದನೆ ದೊರೆಯಲ್ಲ. ಬೆಳೆಯುತ್ತಿರುವ ನಗರ ಸಿಂಧನೂರಿನಲ್ಲಿ ಈಗ ನಗರಸಭೆ ಕರೆಗೆ ಜನ ಸ್ಪಂದಿಸಿದ್ದು, ಖಜಾನೆಗೆ ನಿತ್ಯ 10 ರಿಂದ 12 ಲಕ್ಷ ರೂ.ವರೆಗೆ ತೆರಿಗೆ ಸಂದಾಯವಾಗುತ್ತಿದೆ.
ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ತೆರಿಗೆ ಕಟ್ಟಲು ನಗರಸಭೆಗೆ ಧಾವಿಸುತ್ತಿದ್ದು, ಸರದಿ ನಿಲ್ಲುವಷ್ಟು ದಟ್ಟಣೆ ಉಂಟಾಗಿದೆ. ಪಾಳೆ ಪ್ರಕಾರ ಒಬ್ಬೊಬ್ಬರಾಗಿ ತೆರಿಗೆ ಕಟ್ಟುತ್ತಿರುವುದರ ಪರಿಣಾಮ ನಗರಸಭೆಯ “ಸ್ವಯಂ ಆದಾಯ’ಕ್ಕೂ ಮನ್ನಣೆ ದೊರಕಿದೆ. ಆಸ್ತಿ ತೆರಿಗೆ, ನೀರಿನ ಶುಲ್ಕ, ಅಂಗಡಿ ಮಳಿಗೆ ಬಾಡಿಗೆಯ ಶುಲ್ಕಗಳು ಇದರಲ್ಲಿ ಸೇರಿವೆ.
ನಗರಸಭೆ ಪ್ರಯತ್ನಕ್ಕೆ ಸ್ಪಂದನೆ: 2024-25ನೇ ಸಾಲಿಗೆ ಸಂಬಂಧಿ ಸಿ ಏಪ್ರಿಲ್‌ನಲ್ಲಿ ಭರಿಸುವ ತೆರಿಗೆ ಮೊತ್ತಕ್ಕೆ ಶೇ.5 ರಿಯಾಯಿತಿ ಘೋಷಿಸಲಾಗಿದೆ. ನಂತರದ ಎರಡು ತಿಂಗಳು ದಂಡ ಮುಕ್ತ, ಬಳಿಕ ದಂಡ ಸಮೇತ ಎನ್ನುವ ಪ್ರಕಟಣೆ ಹೊರಡಿಸಲಾಗಿದೆ. ಇದಾಗ ಬಳಿಕ ಬಹುತೇಕರು ಜಾಗೃತರಾಗಿ ತೆರಿಗೆ ಕಟ್ಟುವ ಮೂಲಕ ಸೌಲಭ್ಯ ಕೇಳಲು ಜಾಗೃತರಾದಂತಿದೆ. ದೈನಂದಿನ ಏಪ್ರಿಲ್ ಆರಂಭದಿಂದ ಈವರೆಗೆ ಭಾರಿ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ದಿನವೊಂದಕ್ಕೆ 10-12 ಲಕ್ಷ ರೂ. ಸರಾಸರಿಯಾದರೆ, ಕೆಲವೊಮ್ಮೆ ಒಂದೇ ದಿನ 14 ಲಕ್ಷ ರೂ.ಗೂ ಹೆಚ್ಚಿನ ತೆರಿಗೆಯನ್ನು ಜನ ಕಟ್ಟಿದ್ದಾರೆ.
10 ಕೋಟಿ ರೂ. ಟಾರ್ಗೆಟ್: ನಗರಸಭೆ 2022-23ನೇ ಸಾಲಿನಲ್ಲಿ ವಾರ್ಷಿಕ 10 ಕೋಟಿ 80 ಲಕ್ಷ 37 ಸಾವಿರ ರೂ.ತೆರಿಗೆ ಸಂಗ್ರಹ ಗುರಿ ಹೊಂದಿತ್ತು. ಆಸ್ತಿ ತೆರಿಗೆ, ನೀರಿನ ಶುಲ್ಕ, ಅಂಗಡಿ ಮಳಿಗೆ ಶುಲ್ಕ ಒಳಗೊಂಡು 5 ಕೋಟಿ 67 ಲಕ್ಷ 66 ಸಾವಿರ ರೂ. ಸಂಗ್ರಹವಾಗಿತ್ತು. 2023-24ನೇ ಸಾಲಿನಲ್ಲಿ 10 ಕೋಟಿ 69 ಲಕ್ಷ 21 ಸಾವಿರ ರೂ. ತೆರಿಗೆ ಬೇಡಿಕೆಯಿತ್ತು. 6 ಕೋಟಿ 60 ಲಕ್ಷ 93
ಸಾವಿರ ರೂ. ಸಂಗ್ರಹ ಮಾಡಲಾಗಿದೆ. ಶೇ.91.16 ಆಸ್ತಿ ತೆರಿಗೆ, ಶೇ.18.78 ನೀರಿನ ತೆರಿಗೆ, ಶೇ.54.22 ಅಂಗಡಿ ಮಳಿಗೆ ತೆರಿಗೆ ಸಂಗ್ರಹಿಸಿದ ಕೀರ್ತಿ ನಗರಸಭೆಗೆ ದಕ್ಕಿದೆ.
ನಳಗಳ ತೆರಿಗೆ ಸಂಗ್ರಹ ಕಡಿತಗೊಂಡ ಹಳೇ ಬಾಕಿ ಪ್ರಮಾಣ ಹೆಚ್ಚಿರುವುದರಿಂದ ಗುರಿ ಸಾಧನೆಯಲ್ಲಿ ಹೆಚ್ಚಿನ ಸಾಂಖ್ಯಿಕ ದಾಖಲೆ ಕಂಡು ಬಂದಿಲ್ಲ. ಇನ್ನು ಮಳಿಗೆ ವಿಷಯದಲ್ಲೂ ಹಳೇ ಮಳಿಗೆ ತೆರವುಗೊಳಿಸಿದ ಬಳಿಕವೂ ಉಳಿದ ಬಾಕಿಯೂ ಸಾಧನೆಗೆ ಅಡ್ಡಿಯಾಗಿದೆ. ಇನ್ನುಳಿದ ಚಾಲ್ತಿ ತೆರಿಗೆ ಸಂಗ್ರಹಿಸುವ ವಿಷಯದಲ್ಲಿ ನಗರಸಭೆ ಮುನ್ನಡೆ ಸಾಧಿಸಿದೆ.
ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿ ಸಾರ್ವಜನಿಕ ಜಾಗೃತಿ, ಶೇ.5 ರಿಯಾಯಿತಿ ಘೋಷಣೆಯಿಂದಾಗಿ ಜನರಿಂದ ಉತ್ತಮ
ಸ್ಪಂದನೆ ವ್ಯಕ್ತವಾಗಿದೆ. ಇದೊಂದು ಸಂತಸದ ವಿಚಾರ.
*ಮಂಜುನಾಥ ಗುಂಡೂರು,
ಪೌರಾಯುಕ್ತರು, ನಗರಸಭೆ, ಸಿಂಧನೂರು
*ಯಮನಪ್ಪ ಪವಾರ