ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ನಗರಸಭೆಯಿಂದ ಜೆಸಿಬಿ ಬಳಸಿ ಚರಂಡಿ ತೆಗೆಯುತ್ತಿದ್ದ ವೇಳೆ ಶಾಸಕ ವೆಂಕಟರಾವ್ ನಾಡಗೌಡ ಅವರ ಪುತ್ರ ಅಭಿಷೇಕ ನಾಡಗೌಡ ಹಾಗೂ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮಧ್ಯೆ ತೀವ್ರ ಮಾತಿನ ಚಕಮಕಿಯಾಗಿದ್ದು, ಬಿಗುವಿನ ಸನ್ನಿವೇಶ ಸೃಷ್ಟಿಯಾಗಿತ್ತು.
ಧಾರಾಕಾರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ನಗರಸಭೆ ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದಿತ್ತು.
ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಉದ್ದೇಶಿಸಿದ ಸ್ಥಳದಲ್ಲಿ ಕಚ್ಚಾ ಚರಂಡಿ ಬೇಡ ಎಂದು ಶಾಸಕರ ಪುತ್ರ ಅಭಿಷೇಕ್ ಆಕ್ಷೇಪಿಸಿದ್ದಾರೆ. ಬಹುನಿರೀಕ್ಷಿತ ಆಸ್ಪತ್ರೆ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್ ಸಮ್ಮುಖದಲ್ಲಿ ಕೈಗೊಂಡ ಕೆಲಸ ನಿಲ್ಲಿಸುವಂತೆ ಆಗ್ರಹಿಸಿ, ಜೆಸಿಬಿ ಡ್ರೈವರ್ ನನ್ಬು ಕೆಳಗೆ ಇಳಿಸಲಾಗಿದೆ. ಲಕ್ಷ್ಮಿ ಕ್ಯಾಂಪಿನ ಭಾಗದಿಂದ ಬರುವ ಮಳೆ ನೀರು ಹೋಗಲು ಅವಕಾಶ ಇಲ್ಲದ್ದರಿಂದ ನೀರು ಸ್ಥಳೀಯ ಮನೆಗಳಿಗೆ ನುಗ್ಗಿತ್ತು. ನೀರು ಹೋಗಲು ವ್ಯವಸ್ಥೆ ಮಾಡುತ್ತಿರುವಾಗ ಈ ಮಾತಿನ ಘರ್ಷಣೆ ಏರ್ಪಟ್ಟಿದೆ.
ಈ ಮೊದಲಿದ್ದ ಚರಂಡಿಯನ್ನು ಆಸ್ಪತ್ರೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದವರು ಮುಚ್ಚಿದ್ದರಿಂದ ಸ್ಥಳೀಯರ ಮನೆಗಳಿಗೆ ನೀರು ನುಗ್ಗಿತ್ತು. ಅದನ್ನು ಸರಿಪಡಿಸಲು ಹೋದಾಗ ಶಾಸಕರ ಪುತ್ರ ಅಭಿಷೇಕ್ ನಾಡಗೌಡ ಅವರು, ಮೂರು ತಿಂಗಳಲ್ಲಿ ಕಾಯಂ ಚರಂಡಿ ನಿರ್ಮಿಸುವುದಾಗಿ ಹೇಳಿ, ಕೆಲಸ ನಿಲ್ಲಿಸಿದರು ಎಂದು ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಕರಾವಳಿಯಲ್ಲಿ ಹೆಚ್ಚುತ್ತಿರುವ ಮಳೆ: ಪರಿಹಾರ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಸೂಚನೆ