Advertisement

ಏಕರೂಪದ ಬೆಳೆಗಳಿಂದ ಫಲವತ್ತತೆಗೆ ಪೆಟ್ಟು: ಡಾ.ಎಚ್.ವಾಯ್. ಸಿಂಗೆಗೋಳ

01:55 PM Sep 15, 2021 | Adarsha |

ಸಿಂದಗಿ: ಏಕ ರೂಪದ ಬೆಳೆಗಳನ್ನು ಬೆಳೆಯುತ್ತಾ ಹೋಗುತ್ತಾರೆ. ಇದರಿಂದ ಭೂಮಿಯ ಫಲವತ್ತತೆಗೆ ಪೆಟ್ಟು ಬೀಳುತ್ತದೆ. ಇಳುವರಿ ಕುಂಠಿತವಾದಾಗ, ಇಳುವರಿ ಹೆಚ್ಚಿಸಲು ರಾಸಾಯಯನಿಕ, ಕೀಟನಾಶಕ ಸಿಂಪಡಿಸುವುದರಿಂದ ಭೂಮಿಯಲ್ಲಿನ ಫಲವತ್ತತೆಯ ಸತ್ವ ಮತ್ತಷ್ಟು ಹಾಳಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ಹೇಳಿದರು.

Advertisement

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಮಟ್ಟದ ಕೃಷಿಕ ಸಮಾಜದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕೃಷಿ ಪದ್ಧತಿಯನ್ನು ನೋಡುವುದಾದರೆ ಮಳೆ ಆಶ್ರಿತ ಪ್ರದೇಶಗಳಲ್ಲಿ ಆಗಾಗ ಬೆಳೆಗಳ ಬದಲಾವಣೆ ಮಾಡಲಾಗುತ್ತದೆ. ಆದರೆ, ನೀರಾವರಿ ಸೌಲಭ್ಯ ಇರುವ ಕೃಷಿಕರು ಪ್ರತಿ ಬೆಳೆಯೂ ಏಕ ರೂಪದ ಬೆಳೆಗಳನ್ನು ಬೆಳೆಯುತ್ತಾ ಹೋಗುತ್ತಾರೆ. ಇದರಿಂದ ಭೂಮಿ ಫಲವತ್ತೆ ಕಡಿಮೆಯಾಗುವ ಜೊತೆಗೆ ಪೋಷಕಾಂಶಗಳ ಕೊರತೆ ಹೆಚ್ಚು ಕಾಣಲು ಪ್ರಾರಂಭವಾಗುತ್ತದೆ. ಅಲ್ಲದೇ ವೈರಸ್‌ಗಳ ಸಂಖ್ಯೆ ಹೆಚ್ಚಾಗಿ ಬೆಳೆಗಳಿಗೆ ರೋಗಬಾಧೆ ಹೆಚ್ಚಾಗುತ್ತದೆ. ಇಳುವರಿ ಕುಂಟಿತವಾಗುತ್ತದೆ ಎಂದು ಹೇಳಿದರು.

ತಾಲೂಕಿನ ಕೃಷಿಯಲ್ಲಿ ಹೆಚ್ಚಾಗಿ ಕಬ್ಬು, ತೊಗರಿ, ಹತ್ತಿ ಬೆಳೆಗಳು ಪ್ರಮುಖ ಬೆಳೆಗಳಾಗಿವೆ. ಏಕರೂಪ ಬೆಳೆ ಬೆಳೆಯುವುದರಿಂದ ಕಬ್ಬಿ ಗೊಣ್ಣೆ ರೋಗಕ್ಕೆ, ತೊಗರಿ ಬೆಳೆ ಗೊಡ್ಡು ಬಿಳುವುದು ಹೀಗೆ ಬೆಳೆ ಕುಂಟಿತವಾಗಿ ಇಳುವರಿಗೆ ಪೆಟ್ಟು ಬೀಳುತ್ತದೆ. ಆದ್ದರಿಂದ ಏಕರೂಪ ಬೆಳೆ ಬೆಳೆಯುವ ಪದ್ಧತಿಯ ಬದಲಾಗಿ ಬೆಳೆ ಬದಲಾವಣೆ ಮಾಡಿ ಬಿತ್ತನೆ ಮಾಡಬೇಕು. ಇದರಿಂದ ಭೂಮಿಯ ಫಲವತ್ತೆ ಕಾಪಾಡುವ ಜೊತೆಗೆ ಬೆಳೆಗಳನ್ನು ರೋಗಬಾಧೆಯಿಂದ ತಪ್ಪಿಸಲು ಹಾಗೂ ಇಳುವರಿ ಹೆಚ್ಚು ಮಾಡಲು ಸಾಧ್ಯವಾಗುವುದು ಎಂದು ಹೇಳಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ಯಾವುದೇ ಕೃಷಿ ತಜ್ಞರು, ವಿಜ್ಞಾನಿಗಳನ್ನು ಕೇಳಿ, ಭೂಮಿ ಫಲವತ್ತತೆ ಕಾಪಾಡಲು ಹಾಗೂ ಅಧಿಕ, ಗುಣಮಟ್ಟದ ಇಳುವರಿ ಪಡೆಯಲು ಅವರು ನೀಡುವ ಒಂದೇ ಒಂದು ಸಲಹೆ ಬಹು ಬೆಳೆ ಪದ್ಧತಿ, ಅಥವಾ ಆಯಾ ಮಾಸ, ಋತು ಹಾಗೂ ಹವಾಗುಣಕ್ಕೆ ಅನುಗುಣವಾಗಿ, ಆಯಾ ಸಂದರ್ಭಗಳಿಗೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಬೇಕು ಎಂಬುದಾಗಿರುತ್ತದೆ. ಆದ್ದರಿಂದ ರೈತರು ಕೃಷಿ ತಜ್ಞರ, ವಿಜ್ಞಾನಿಗಳ ಸಲಹೆ, ಮಾರ್ಗಸೂಚಿ ಪಾಲನೆ ಮಾಡಬೇಕು. ಭೂಮಿಯ ಫಲವತ್ತೆ ಹೆಚ್ಚಿಸಲು ಹಾಗೂ ಬೆಳೆ ಉತ್ಪದಾನೆಯಲ್ಲಿ ಹೆಚ್ಚಿಸಲು ರೈತರು ಮುಂದಾಗಬೇಕು ಎಂದು ಹೇಳಿದರು.

Advertisement

ಇದನ್ನೂ ಓದಿ:ಅಪಘಾತದಲ್ಲಿ ಮೆದುಳು ನಿಷ್ಕ್ರಿಯ; ಪುತ್ರಿಯ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು 

ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಮಾತನಾಡಿ, ಇತ್ತೀದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಬಹಳಷ್ಟು ಬದಲಾವಣೆಗಳಾಗಿದೆ. ಇ-ಕಾಮರ್ಸ್ ಮಾರುಕಟ್ಟೆ ಪ್ರಚಲಿತಕ್ಕೆ ಬಂದಾಗಿನನಿಂದ ಕೃಷಿಕರು ಬೆಳೆಯುವ ಧಾನ್ಯ, ತರಕಾರಿ, ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಬೆಳೆಯಯುವ ಹಣ್ಣು, ತರಕಾರಿಗಳನ್ನು ರೈತರ ಜಮೀನಿಗೇ ಹೋಗಿ ಕೊಳ್ಳುವ ವರ್ತಕರ ವಲಯವೊಂದು ಹುಟ್ಟಿಕೊಂಡಿದೆ. ಹೀಗಾಗಿ ಋತುಮಾನಕ್ಕೆ ಅನುಗುಣವಾದ ಬೆಳೆಗಳನ್ನು ಬೆಳೆಯಲು ಈಗ ಸೂಕ್ತ ವಾತಾವರಣವಿದೆ.

ಇನ್ನೇನಿದ್ದರೂ ರೈತರು ಮನಸು ಬದಲಿಸಿ, ತಾವು ಬೆಳೆಯುವ ಬೆಳೆಗಳನ್ನು ಬದಲಿಸಬೇಕು. ವರ್ಷದಿಂದ ವರ್ಷಕ್ಕೆ ಅಥವಾ ಬೆಳೆಯಿಂದ ಬೆಳೆಗೆ ವಿಭಿನ್ನ ಬೆಳೆ ಆಯ್ಕೆ ಮಾಡಿಕೊಳ್ಳುವ ಮೂಲಕ ಭೂಮಿಯ ಫಲವತ್ತತೆ ಕಾಪಾಡುವ ಜೊತೆಗೆ ತಮ್ಮ ಆದಾಯವನ್ನೂ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕು. ಕೃಷಿಕರು ವೈಜ್ಞಾನಿಕ ಕ್ರಮದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪನ್ನವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳ ಬಗ್ಗೆ, ರೋಗ ಬಾಧೆಗೆ ತುತ್ತಾಗಿರುವ ಬೆಳೆಗಳ ಬಗ್ಗೆ ಹಾಗೂ ರೋಗ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು.

ತಾಲೂಕಾ ಕೃಷಿಕ ಸಮಾಜದ ಉಪಾಧ್ಯಕ್ಷ ಸಂಗಾರೆಡ್ಡಿ ದೇಸಾಯಿ, ನಿರ್ದೇಶಕರಾದ ಜಿ.ಕೆ. ನೆಲ್ಲಗಿ, ನಿಂಗನಗೌಡ ಪಾಟೀಲ, ರಾಜಶೇಖರ ಪೂಜಾರಿ, ಬಿ.ಜಿ. ಪಾಟೀಲ, ಎಸ್.ಎಂ. ಆನಂದಿ, ಹೂಲಸೂರ, ಸುರೇಖಾ ಬಡಾನವರ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಭಾಗವಹಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next