ಸಿಂದಗಿ: ಎಚ್.ಜಿ. ಕಾಲೇಜಿನ ಕ್ಯಾಂಟೀನ್ ನಡೆಸುತ್ತಿದ್ದ ಪ್ರಕಾಶ ಚಿಂಚೂರ ದಂಪತಿಗಳು ಲಾಕ್‌ಡೌನ್ ನಡುವೆ ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ನಂತರ ಹೋಟೆಲ್ ಮುಚ್ಚಲಾಯಿತು. ಇದರಿಂದ ಜೀವನ ನಡೆಸುವುದು ಹೇಗೆ? ಎಂಬ ಚಿಂತೆ ಈ ಇಬ್ಬರು ದಂಪತಿಗಳಲ್ಲಿ ಉದ್ಭವವಾಗಿ ದಿಕ್ಕು ತೋಚದಂತಾಯಿತು. ಈ ಮಧ್ಯೆ ತಮ್ಮೂರು ತಾಲೂಕಿನ ಹಂದಿಗನೂರ ಗ್ರಾಮಕ್ಕೆ ಹೋಗಲು ಸಾಧ್ಯವಿರಲಿಲ್ಲ. ಹೋದರೂ, ಅಲ್ಲೂ ಇದೇ ಪರಿಸ್ಥಿತಿ ಇತ್ತು. ಜೇಬಿನಲ್ಲಿದ್ದ ಹಣ ಮುಗಿಯುತ್ತಿದ್ದಂತೆ ಜೀವನ ನಡೆಸುವ ಆತಂಕ ಹೆಚ್ಚಿತು.
ಲಾಕ್‌ಡೌನ್ ಮಧ್ಯದಲ್ಲೂ ಜೀವನೋಪಾಯಕ್ಕೆ ಏನಾದರೂ ದಾರಿ ಹುಡುಕಿ ಹಣ ಸಂಪಾದಿಸಿ ಜೀವನ ಮಾಡುವುದು ಹೇಗೆ ಎಂದು ಆಲೋಚಿಸುವಾಗ ಹೊಳೆದದ್ದೇ ತರಕಾರಿ ವ್ಯಾಪಾರ. ನಂತರ ಸಗಟು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ಮಾರಾಟ ಮಾಡಲು ನಿರ್ಧರಿಸಿದ್ದರಾದರೂ ತರಕಾರಿ ಖರೀದಿಗೆ ಹಣ ಬೇಕಾಗಿತ್ತು.
ತಮ್ಮಲ್ಲಿದ್ದ ಅಲ್ಪ ಹಣ ಒಟ್ಟುಗೂಡಿಸಿದರು. ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಬೆಳೆದ ತರಕಾರಿ, ಹಣ್ಣು ಖರೀದಿಸಿದರು. ತಮ್ಮ ಹೋಟೆಲ್ ಮುಂದೆ ಕುಳಿತು ಚಿಲ್ಲರೆಯಾಗಿ ಮಾರಾಟ ಮಾಡಿದರು. ಪಕ್ಕದ ವ್ಯಾಪಾರಿಯಿಂದ ತಕ್ಕಡಿ ಪಡೆದು ಗ್ರಾಹಕರಿಗೆ ತೂಕ ಮಾಡಿಕೊಡುತ್ತಿದ್ದರು. ಹೀಗೆ ಒಂದು ವಾರ ಕಳೆದ ಮೇಲೆ ತಾವೇ ಒಂದು ಹಳೆ ತಕ್ಕಡಿ ಖರೀದಿಸಿದರು. ಕೆಲಸ ಹೋದರೂ ಹೊಸದಾಗಿ ಪ್ರಾರಂಭಿಸಿದ ತರಕಾರಿ ವ್ಯಾಪಾರ ಕೈ ಹಿಡಿಯಿತು. ಈಗ ನೇರವಾಗಿ ರೈತರಿಂದ ತರಕಾರಿ, ಕಾಳು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ಹುಣಸೆ ಮುಂತಾದ ತರಕಾರಿ ಪದಾರ್ಥಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ ತಂದು ಮಾರಿ ಜೀವನೋಪಾಯಕ್ಕೆ ದಾರಿ ಕಂಡುಕೊಂಡಿದ್ದಾರೆ.
ತರಕಾರಿ ವ್ಯಾಪಾರ ಪ್ರಾರಂಭಿಸದೇ ಇದ್ದರೆ ಹಸಿವಿನಿಂದ ನರಳಬೇಕಾಗಿತ್ತು. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಕೆಲಸ ಕಳೆದುಕೊಂಡರೂ ಬದುಕಬಲ್ಲೆವು ಎಂಬ ಧೈರ್ಯ ಬಂದಿದೆ.
ಪೂಜಾ ಪ್ರಕಾಶ ಚಿಂಚೂರ