Advertisement

ಭೂ ಪರಿವರ್ತಿಸುವ ವಿಧಾನ ಸರಳೀಕರಣ: ಅಶೋಕ್‌

09:21 PM Dec 21, 2022 | Team Udayavani |

ಬೆಳಗಾವಿ: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸುವ ವಿಧಾನವನ್ನು ಸರಳಗೊಳಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

Advertisement

ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95(2)ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಛಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿಯು ನಿಯಮಗಳಿಗೆ ಒಳಪಟ್ಟು ಅನುಮತಿಯನ್ನು ನಿರಾಕರಿಸಬಹುದು ಅಥವಾ ತಾನು ಯುಕ್ತವೆಂದು ಆಲೋಚಿಸುವಂತ ಷರತ್ತುಗಳಿಗೆ ಒಳಪಟ್ಟು ಕೊಡಬಹುದಾಗಿದೆ.

ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದಾಗ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 96(4)ರನ್ವಯ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ ಕಂದಾಯ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶಕ್ಕೆ ಹೊಂದಿರುವ ಯಾವುದೇ ಭೂಮಿಯನ್ನು ಯಾವುದೇ ಇತರ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಯ ಅನುಮತಿಯಿಲ್ಲದೆ ಕಟ್ಟಡ ಕಟ್ಟುವುದು ಅಥವಾ ಉಪಯೋಗ ಮಾಡಿದ್ದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 96(4)ರನ್ವಯ ದಂಡ ವಿಧಿಸಿ, ಭೂ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ಕ್ಕೆ ಇತ್ತೀಚೆಗೆ ಯಾವುದೇ ತಿದ್ದುಪಡಿ ತಂದಿರುವುದಿಲ್ಲ ಎಂದು ಉತ್ತರಿಸಿದರು.

ಮಳೆಯಿಂದ ಹಾನಿಗೀಡಾದ 2.30 ಲಕ್ಷ ಮನೆಗಳಿಗೆ ಪರಿಹಾರ
ಬೆಳಗಾವಿ: ಮೂರು ವರ್ಷಗಳಲ್ಲಿ ಮಳೆಯಿಂದ ಹಾನಿಗೊಳಗಾದ 3.03 ಲಕ್ಷ ಮನೆಗಳ ಪೈಕಿ 2.30 ಲಕ್ಷ ಮನೆಗಳಿಗೆ ನಿಯಮದಂತೆ ಪರಿಹಾರ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

Advertisement

ಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು, 2019ರಿಂದ 2022ರ ವರೆಗೆ ಮಳೆಗಾಲದಲ್ಲಿ 3,03,648 ಮನೆಗಳು ಹಾನಿಗೊಳಗಾಗಿವೆ. ಅದರಲ್ಲಿ ಈಗಾಗಲೇ 2,30,684 ಮನೆಗಳಿಗೆ ಪರಿಹಾರ ನೀಡಲಾಗಿದೆ.

ಅದರಂತೆ ಶೇ.76 ಮನೆಗಳಿಗೆ ಪರಿಹಾರ ನೀಡುವುದು ಮುಕ್ತಾಯವಾಗಿದೆ. ಇನ್ನೂ 1.25 ಲಕ್ಷ ಮನೆಗಳಿಗೆ 3,678 ಕೋಟಿ ರೂ. ಪರಿಹಾರ ರೂಪದಲ್ಲಿ ವಿತರಿಸಲಾಗಿದೆ. ಅದರ ಜತೆಗೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಡಿ.14ರಂದು 707.41 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next