ಗದಗ: ಕೋವಿಡ್ ಸೋಂಕಿನ ಭೀತಿ ಮಧ್ಯೆಯೂ ಗಣೇಶ ಚತುರ್ಥಿ ಮುನ್ನದಿನವಾದ ಶುಕ್ರವಾರ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದರು. ಮಧ್ಯಾಹ್ನದವರೆಗೆ ಮಂಕಾಗಿದ್ದ ಮಾರುಕಟ್ಟೆ ವಹಿವಾಟು ಬಳಿಕ ಚುರುಕು ಪಡೆಯಿತು. ಸಂಜೆ ವೇಳೆಗೆ ಇಲ್ಲಿನ ಬ್ಯಾಂಕ್ ರೋಡ್ ಸೇರಿದಂತೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿತ್ತು.
ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ನಿಷೇಧಿಸಿದ್ದರಿಂದ ಎಲ್ಲೆಡೆ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ನಡೆಯಿತು. ಗಣೇಶಮೂರ್ತಿಗಳೊಂದಿಗೆ ವಿವಿಧ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಹೆಚ್ಚಿದೆ.
ಮಣ್ಣಿನ ಗಣೇಶಕ್ಕೆ ಬೇಡಿಕೆ: ಜಿಲ್ಲಾಡಳಿತ, ಮಣ್ಣಿನ ಗಣೇಶ ಕಲಾವಿದರ ಸಂಘದಿಂದ ನಗರದ ಎಪಿಎಂಸಿ ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಗಣೇಶ ಮೂರ್ತಿಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ. ಸುಮಾರು 20 ಮಳಿಗೆಗಳಲ್ಲಿ 10 ಸೆಂ.ಮೀ. ನಿಂದ 3 ಅಡಿ ಎತ್ತರದ ಮಣ್ಣಿನ ಗಣಪತಿಗಳನ್ನು ಮಾರಾಟಮಾಡಲಾಗುತ್ತಿದೆ. ಸುಮಾರು 400 ರೂ. ಗಳಿಂದ 4 ಸಾವಿರ ರೂ. ವರೆಗೆ ದರದಲ್ಲಿ ಮಾರಾಟಗೊಳ್ಳುತ್ತಿದೆ.ಆದರೆ ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಬೆಲೆ ತುಸು ದುಬಾರಿಯಾಗಿದೆ. ಸಾರ್ವಜನಿಕರಿಗೂ ಆರ್ಥಿಕ ಮುಗ್ಗಟ್ಟು ಎದುರಾಗಿದ್ದರಿಂದ ಸಾಂಕೇತಿಕಆಚರಿಸುತ್ತಿದ್ದಾರೆ. ಹೀಗಾಗಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂಬ ಮಾತು ಕೇಳಿ ಬಂದವು.
ವಿಘ್ನೇಶ್ವರ ಪೂಜೆಗೆ ಅಗತ್ಯವಾದ ಬಾಳೆ ಗಿಡ, ಕಬ್ಬಿನ ಗಳಗಳು, ಸೇವಂತಿಗೆ, ಮಲ್ಲಿಗೆ ಹೂವು, ಚೆಂಡು ಹೂವುಗಳು, ನಾನಾ ರೀತಿಯ ಹಣ್ಣುಗಳು, ಮಾವಿನ ತಳಿರುಗಳ ಖರೀದಿಗೆಯಲ್ಲಿ ಮಹಿಳೆಯರು ಮಗ್ನರಾಗಿದ್ದರು. ಹೀಗಾಗಿ ಗ್ರೇನ್ ಮಾರುಕಟ್ಟೆ, ಬ್ಯಾಂಕ್ ರಸ್ತೆ, ಟಾಂಗಾ ಕೂಟ, ಸ್ಟೇಷನ್ ರಸ್ತೆ, ಮಹೇಂದ್ರಕರ ವೃತ್ತಗಳಲ್ಲಿ ಮುಂತಾದ ಕಡೆ ವ್ಯಾಪಾರ, ವಹಿವಾಟು ಜೋರಾಗಿತ್ತು.