Advertisement

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

05:48 PM Oct 02, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕಮಗಳೂರು: ಕಾಂಕ್ರೀಟ್‌ ನಗರ ಜೀವನದಲ್ಲಿ ಬೆಂದು ಬೇಸತ್ತ ಜೀವಗಳಿಗೆ ಮುದ ನೀಡುವ ಜಿಲ್ಲೆಯ ಮುತ್ತೋಡಿ ಅಭಯಾರಣ್ಯಕ್ಕೆ ಈಗ ಇಪ್ಪತ್ತೈದರ ಹರಯ. 1998ರಲ್ಲಿ ಅಭಯಾರಣ್ಯವೆಂದು ಘೋಷಣೆಯಾದ ಮುತ್ತೋಡಿ ಅಭಯಾರಣ್ಯ ತನ್ನ ಮಡಿಲಿನಲ್ಲಿ ಜೀವ ಸಂಕುಲ, ಸಸ್ಯ ಶ್ಯಾಮಲೆ, ವೈವಿಧ್ಯದ ಮರಗಿಡಗಳಿಂದ ನೋಡುಗರ ಗಮನ ಸೆಳೆಯುವುದು ಮಾತ್ರವಲ್ಲದೆ ತುಸು ನೆಮ್ಮದಿ ನೀಡುವ ಪ್ರಸಿದ್ಧ ತಾಣವಾಗಿ ಮಾರ್ಪಟ್ಟಿದೆ.

Advertisement

ವಿಶಾಲವಾದ ಭೂ ಪ್ರದೇಶವನ್ನು ಒಳಗೊಂಡಿರುವ ಮುತ್ತೋಡಿ ಅಭಯಾರಣ್ಯ 300ಕ್ಕೂ ವಿವಿಧ ಜಾತಿಯ ಪಕ್ಷಿಗಳು, 33ಕ್ಕೂ ಹೆಚ್ಚು ಹುಲಿಗಳು, ಕಾಡಾನೆಗಳು, ಕಾಡುಕೋಣ, ಜಿಂಕೆ, 445 ಆನೆ, 119 ಚಿರತೆ ಹೀಗೆ ವಿವಿಧ ವನ್ಯಪ್ರಾಣಿಗಳ ತಾಣವಾಗಿದೆ.

ಅಷ್ಟೇ ಅಲ್ಲದೆ ವಿವಿಧ ಜಾತಿಯ ಮರಗಿಡಗಳನ್ನು ಹೊಂದಿರುವ ಮುತ್ತೋಡಿಯಲ್ಲಿ 300 ವರ್ಷಗಳ ಹಳೆಯ ಸಾಗುವಾನಿ ಮರವಿದ್ದು, ಇದನ್ನು ತಬ್ಬಿಕೊಳ್ಳಲು ಐದು ಜನರು ಸುತ್ತುವರಿಯಬೇಕೆಂದು ಇಲ್ಲಿನ ಸಿಬ್ಬಂದಿ ಹರ್ಷ ವ್ಯಕ್ತಪಡಿಸುತ್ತಾರೆ. ಶೋಲಾ ಕಾಡು, ಹುಲ್ಲುಗಾವಲು, ಬಿದಿರು, ನದಿಗಳು ಝರಿಗಳು, ಪ್ರಕೃತಿಯ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿ  ಪ್ರವಾಸಿಗರನ್ನು ಕೈಬೀಸಿ ಕರೆಯುವ ಮುತ್ತೋಡಿ ಅಭಯಾರಣ್ಯಕ್ಕೆ ಈಗ ಇಪ್ಪತ್ತೈದರ ಹರೆಯವಾಗಿದ್ದು, ತನ್ನ ಸೌಂದರ್ಯದಿಂದಲೇ ಎಲ್ಲರ ಮನಗೆಲ್ಲುತ್ತಿದೆ. ನಗರ ನಾಗರಿಕರ ಮೆಚ್ಚುಗೆಗೆಗೂ ಪಾತ್ರವಾಗಿದೆ.

ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಅನೇಕ ಪ್ರವಾಸಿ ತಾಣಗಳು ಲಭ್ಯವಿದ್ದು, ಅದರಲ್ಲಿ ಮುತ್ತೋಡಿ
ಅಭಯಾರಣ್ಯವೂ ಒಂದು. ಪ್ರತೀ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಕಾನನದ ಮಧ್ಯೆ ಸಾಗುವ ಸಫಾರಿ ಅತ್ಯಂತ ಖುಷಿ ನೀಡುತ್ತದೆ. ಓಪನ್‌ ಜೀಪು, ಬಸ್‌ಗಳಲ್ಲಿ ಇಲ್ಲಿನ ಅರಣ್ಯ ಸಿಬ್ಬಂದಿಗಳು ಕಾನನದೊಳಗೆ ನಿಮ್ಮನ್ನು ಕರೆದೊಯ್ಯತ್ತಾರೆ. ಅಭಯಾರಣ್ಯದೊಳಗೆ ಸಾಗುತ್ತಿದ್ದಂತೆ ಕುವೆಂಪು, ತೇಜಸ್ವಿ ಸೇರಿದಂತೆ ಇತರೆ ಕವಿ ಗಳು ವರ್ಣಿಸಿದ ಮಲೆನಾಡಿನ ಸೊಬಗು ಇಲ್ಲಿನ ಕಾಡು ನಿಮ್ಮ ಕಣ್ಣ ಮುಂದೆ ಬರುತ್ತದೆ.

ಕೊರಕಲು ಕಲ್ಲು- ಮಣ್ಣು ಹಾದಿಯಲ್ಲಿ ಸಾಗುತ್ತಿದ್ದರೆ, ಕಾಡು ಪ್ರಾಣಿಗಳ ದರ್ಶನ ನಿಮಗಾಗುತ್ತದೆ. ತಾವೇನು ಯಾವ ಮಾಡೆಲ್‌
ಗಳಿಗೂ ಕಮ್ಮಿ ಇಲ್ಲದಂತೆ ನಿಮ್ಮ ಕ್ಯಾಮೆರಾಗಳಿಗೆ ಫೋಸ್‌ ನೀಡುತ್ತವೆ. ಹಿಂಡು ಹಿಂಡಾಗಿರುವ ಜಿಂಕೆಗಳೂ, ತಮಗೆ ಯಾರ ಭಯವಿಲ್ಲವೆಂಬಂತೆ ಗುರಾಯಿಸಿ ನೋಡುವ ಕಾಡುಕೋಣ, ಕಾಡೆಮ್ಮೆ, ಉಡ, ಅಲ್ಲಲ್ಲಿ ಕಾಣಸಿಗುವ ನವಿಲು, ಕಾಡುಕುರಿ, ಬೇಟೆಗಾಗಿ ಹೊಂಚು ಹಾಕಿ ಕುಳಿತಿರುವ ವ್ಯಾಘ್ರ, ಆನೆಗಳು (ಹುಲಿ-ಆನೆ ಕೆಲವೊಮ್ಮೆ ದರ್ಶನ ನೀಡುತ್ತವೆ), ಕಾಡು ಹಂದಿ, ಕೆಂದಳಿಲು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ.

Advertisement

ಅಭಯಾರಣ್ಯದ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಅಲ್ಲೊಂದು ಸಾಗುವಾನಿ ಮರವಿದ್ದು, ಈ ಮರ 300 ವರ್ಷಗಳಷ್ಟು ಹಳೆಯ ಮರವಾಗಿದೆ. ಮರದ ಬುಡವನ್ನು ತಬ್ಬಿಕೊಳ್ಳಲು ಕನಿಷ್ಟ ಪಕ್ಷ ಐದು ಜನರಾದರೂ ಬೇಕು. ಹಾಗೇ ಮುಂದೆ ಸಾಗುತ್ತಿದ್ದರೆ, ಪ್ರಾಣಿಗಳ ದರ್ಶನ ಪಡೆದುಕೊಳ್ಳುವ ಪ್ರವಾಸಿಗರ ಅಭಯಾರಣ್ಯದೊಳಗೆ ಬ್ರಿಟಿಷ್‌ ಕಾಲದಲ್ಲಿ ನಿರ್ಮಾಣವಾಗಿರುವ ಗೆಸ್ಟ್‌ಹೌಸ್‌ ಸಿಗುತ್ತದೆ.

ಇದರ ವಿಶೇಷ ಏನಂತೀರಾ? 1910ರಲ್ಲಿ ಈ ಗೆಸ್ಟ್‌ ಗೌಸ್‌ ನಿರ್ಮಾಣ ಮಾಡಲಾಗಿದ್ದು, ಅಂದಿನ ಕಾಲದಲ್ಲಿ 3450 ರೂ. ವೆಚ್ಚ ಮಾಡಿ ನಿರ್ಮಿಸಲಾಗಿದೆ. ಈಗಿನ ಕಾಲಕ್ಕೆ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹಾಗೇ ಮತ್ತೆ ಮುಂದೆ ಸಾಗಿದರೆ ಪ್ರಾಣಿ-ಪಕ್ಷಿಗಳ ದರ್ಶನ ನಿಮಗಾಗಿ ಕಾದಿರುತ್ತದೆ. ಇದು ಪ್ರಾಣಿ ಪಕ್ಷಿಗಳ ಲೋಕವನ್ನು ತೆರೆದಿಟ್ಟರೆ ಮತ್ತೊಂದು ಕಡೆ ಎಲ್ಲಿ ನೋಡಿದರು ಹಳ್ಳಕೊಳ್ಳಗಳು, ಸೋಮಾವತಿ ನದಿಯ ದಂಡೆಯ ಮೇಲೆ ಸಾಗುತ್ತಿದ್ದರೆ, ರಭಸವಾಗಿ ಹರಿಯುವ ನದಿಯ ನೀರು, ಇನ್ನು ಪ್ರಾಣಿ- ಪಕ್ಷಿಗಳಿಗಾಗಿ ಅಲ್ಲಲ್ಲಿ ನಿರ್ಮಿಸಿರುವ ಕೆರೆಗಳು, ಹುಲ್ಲುಗಾವಲು, ಪ್ರಾಣಿಗಳು ಓಡಾಡಿರುವ ಕುರುಹು, ಸಾಗುವಾನಿ ಸೇರಿದಂತೆ ವಿವಿಧ ಜಾತಿಯ ಬೃಹತ್‌ ಗಾತ್ರದ ಮರಗಳು ಇದೆಲ್ಲವೂ ನಿಮ್ಮನ್ನು ಮಲೆನಾಡಿನ ವೈಭವಕ್ಕೆ ಕರೆದೊಯ್ಯುತ್ತದೆ. ಅಭಯಾರಣ್ಯಕ್ಕೆ
25 ವರ್ಷ ಕಳೆದಿದೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಪ್ರಾಣಿಗಳ ದರ್ಶನಕ್ಕೆ ಅದೃಷ್ಟವೂ ಬೇಕು
ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿರುವ ಭದ್ರಾ ಅಭಯಾರಣ್ಯದಲ್ಲಿ ಸಫಾರಿ ತೆರಳಿದರೆ, ಪ್ರಾಣಿಗಳ ದರ್ಶನವಾಗುತ್ತದೆ. ಆದರೆ ಮುತ್ತೋಡಿಯಲ್ಲಿ ಪ್ರಾಣಿಗಳ ದರ್ಶನ ಪಡೆಯಲು ಅದೃಷ್ಟವೂ ಬೇಕು. ಏಕೆಂದರೆ ಇಲ್ಲಿ ಪ್ರಾಣಿಗಳ ದರ್ಶನ ಕೆಲವೊಮ್ಮೆ ಸಿಗುವುದೇ ಇಲ್ಲ. ಅದೆಷ್ಟೋ ಜನರು ಹಣ ನೀಡಿ ನಿರಾಸೆಯಿಂದ ಬಂದಿದ್ದು ಇದೆ. ಅದೃಷ್ಟ ಇದ್ದರೆ ರಾಶಿ ರಾಶಿ ವನ್ಯಮೃಗಗಳ ಸೌಂದರ್ಯ ಸವಿಯಬಹುದು. ಅದೇನೇ ಇರಲಿ. ಇಪ್ಪತ್ತೈದು ವರ್ಷ ಕಳೆದಿರುವ ಅಭಯಾರಣ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮೃದ್ಧಿಗೊಂಡು ಅತ್ಯಾಕರ್ಷಕವಾಗಲಿ ಎನ್ನುವುದು ಪರಿಸರ ಪ್ರಿಯರ ಆಶಯವಾಗಿದೆ.

ಮುತ್ತೋಡಿ ಅಭಯಾರಣ್ಯದಲ್ಲಿ ವನ್ಯಜೀವಿಗಳ ಸಂಕುಲ ಬಹಳಷ್ಟು ಸಮೃದ್ಧವಾಗಿದೆ. ಆನೆ, ಹುಲಿ, ಚಿರತೆ ಸೇರಿದಂತೆ ಸಾಕಷ್ಟು ವನ್ಯಜೀವಿಗಳಿಗೆ ನೆಲೆಯಾಗಿದೆ. ಜೀವರಾಶಿಯ ಜತೆಗೆ ಮರಗಿಡಗಳು ಸಮೃದ್ಧವಾಗಿ ಬೆಳೆದಿವೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ
ಇಷ್ಟೊಂದು ಸುಂದರವಾಗಿ ಅಭಯಾರಣ್ಯ ಬೆಳೆದಿದೆ ಎಂದರೆ ಅದಕ್ಕೆ ನಮ್ಮ ಸಿಬ್ಬಂದಿ ಪರಿಶ್ರಮವೇ ಕಾರಣ.
●ಯಶ್‌ಪಾಲ್‌ ಕ್ಷೀರಸಾಗರ, ಭದ್ರಾ ಹುಲಿ
ಸಂರಕ್ಷಿತ ಪ್ರದೇಶ ಕ್ಷೇತ್ರ ನಿರ್ದೇಶಕರು‌

*ಸಂದೀಪ ಜಿ.ಎನ್.ಶೇಡ್ಗಾರ್

Advertisement

Udayavani is now on Telegram. Click here to join our channel and stay updated with the latest news.

Next