ಸುರತ್ಕಲ್: ಚೇಳ್ಯಾರು ಗ್ರಾಮದ ಸರಹದ್ದಿನಲ್ಲಿ ಹರಿಯುವ ನಂದಿನಿ ನದಿಯಲ್ಲಿ ಹೂಳು ತುಂಬಿ ಕೃಷಿಕರ ಪಾರಂಪರಿಕ ಜೀವನಕ್ಕೆ ಹೊಡೆತ ನೀಡಿದ್ದು ಇದರ ಜತೆಗೆ ಮಾಲಿನ್ಯದಿಂದ ಮೀನುಗಾರಿಕೆಗೂ ಧಕ್ಕೆ ಉಂಟಾಗಿದೆ. ಖಂಡಿಗೆ ಧರ್ಮರಸು ಉಳ್ಳಾಯ ಜಾತ್ರೆಗೆ ಮೀನು ಹಿಡಿಯುವ ಹಬ್ಬಕ್ಕೆ ಹೂಳು ತುಂಬಿ ಸಂತಸಕ್ಕೆ ಹೊಡೆತ ನೀಡಿದೆ.
ಹೂಳಿನ ಸಮಸ್ಯೆ ಜತೆಗೆ ನಗರ ಪ್ರದೇಶದ ಕೊಳಚೆ ನೀರು ಹಳ್ಳಕೊಳ್ಳ ದಾಟಿ ನಂದಿನಿ ನದಿಗೆ ಸೇರುತ್ತಿದ್ದು, ಒಳಚರಂಡಿ ತ್ಯಾಜ್ಯ ಸೋರಿಕೆ ಪರಿಣಾಮ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ನೀರಿಗಿಳಿದರೆ ಎಲ್ಲಿ ತುರಿಕೆ, ಹುಣ್ಣು ಮತ್ತಿತರ ಚರ್ಮ ಕಾಯಿಲೆ ಆಂಟಿಕೊಳ್ಳುವ ಭೀತಿ ಉಂಟಾಗಿದೆ.
ಖಂಡಿಗೆ ಧರ್ಮರಸು ಉಳ್ಳಾಯನ ಕಂಡೇವು ಜಾತ್ರೆ ಮೇ 14ರಂದು ನಡೆಯಲಿದೆ. ಅಂದು ಮುಂಜಾನೆ ದೈವದ ಮುಂದೆ ಪ್ರಾರ್ಥನೆ ನೆರವೇರಿಸಿದ ಬಳಿಕ ಚೇಳ್ಯಾರು ನಂದಿನಿ ನದಿಯಲ್ಲಿ ಮಕ್ಕಳಿಂದ ವೃದ್ಧರವರೆಗೂ ತಂಡೋಪತಂಡವಾಗಿ ನದಿಗೆ ಹಾರಿ ಮೀನು ಹಿಡಿಯುವ ಕಾಲವೊಂದಿತ್ತು. ಆದರೆ ಇದೀಗ ದೂರದ ಪ್ರದೇಶದಿಂದ ಬರುವ ಮೀನುಗಾರರು ಒಂದಿಷ್ಟು ಮಂದಿ ಆಗಮಿಸಿ ಮೀನು ಹಿಡಿದು ಮಾರುತ್ತಾರೆ. ಸ್ಥಳೀಯರಲ್ಲಿ ಕೆಲವರು ಅಂಜಿಕೆ ಯಿಂದಲೇ ನದಿಗಿಳಿದು ಮೀನು ಹಿಡಿಯುವ ಸಾಹಸ ಪ್ರದರ್ಶಿಸುತ್ತಾರೆ. ಆದರೆ ಈ ಹಿಂದಿನ ಹುಮ್ಮಸ್ಸು, ಜಾತ್ರೆ ಸಂಭ್ರಮ ಮಾಲಿನ್ಯದಿಂದಾಗಿ ಕಳೆಗುಂದಿದೆ ಎನ್ನಬಹುದು.
ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ
ಸ್ಥಳೀಯ ರೈತರಿಗೆ, ಧಾರ್ಮಿಕ ಕೇಂದ್ರಕ್ಕೆ ನಂದಿನಿ ನದಿ ಮಾಲಿನ್ಯದಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಹೂಳು ತುಂಬಿ ಕೃಷಿಗೂ ಸಮಸ್ಯೆಯಾಗಿದೆ. ಇದಕ್ಕಾಗಿ ಡಿಸಿ ಅವರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿ, ಸಮಸ್ಯೆ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಹೂಳು ತೆಗೆಯಲು ಹೆಚ್ಚು ಅನುದಾನ ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಬಿಡುಗಡೆಗೆ ಮನವಿ ಮಾಡಲಾಗುವುದು.
– ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ – ಮೂಡುಬಿದಿರೆ