Advertisement

ರೇಷ್ಮೆ ಬೆಳೆದು ರಾಜನಾದ !

11:43 AM May 28, 2019 | Sriram |

ರೇಷ್ಮೆ ಬೆಳೆಗೆ ಕಡಿಮೆ ನೀರು ಸಾಕು. ಜೊತೆಗೆ,ಒಂದು ವರ್ಷಕ್ಕೆ ನಾಲ್ಕು ಬೆಳೆ ತೆಗೆಯಬಹುದು. ಒಂದು ವೇಳೆ ರೇಷ್ಮೆ ಮೊಟ್ಟೆಗೆ ಬೆಲೆ ಸಿಗದಿದ್ದರೂ, ಹಿಪ್ಪು ನೇರಳೆ ಸೊಪ್ಪು ಮಾರಿಯೇ ಲಾಭ ಮಾಡಿಕೊಳ್ಳಬಹುದು ಎನ್ನುತ್ತಾರೆ ಗೋವಿಂದರಾಜು.

Advertisement

ಆಧುನಿಕ ಯುಗದಲ್ಲಿ ಮಹತ್ತರ ಸಾಧನೆಗೆ ಉನ್ನತ ಶಿಕ್ಷಣ ಹಾಗೂ ಶ್ರೀಮಂತಿಕೆ ಅತ್ಯಗತ್ಯ ಎಂದು ಪ್ರತಿಪಾದಿಸುವವರಿದ್ದಾರೆ; ಆದರೆ ಈ ಮಾತಿಗೆ ಅಪವಾದ ಮಧುಗಿರಿ ತಾಲ್ಲೂಕಿನ ಬ್ಯಾಲ್ಯ ಗ್ರಾಮದ ಯಶಸ್ವಿ ರೇಷ್ಮೆ ಬೆಳೆಗಾರ ಬಿ.ಎಸ್‌. ಗೋವಿಂದರಾಜು. ಇವರು ಹುಟ್ಟಿ ದ್ದು ಬಡವರ ಮನೆಯಲ್ಲಿ. ಬೆಳೆದಿದ್ದೂ ಬಡತನದಲ್ಲಿ; ಆದರೆ ಈಗ ಒಂದಿಡೀ ಊರಿಗೆ ಮಾದರಿ ಆಗುವಷ್ಟರ ಮಟ್ಟಿಗೆ ಇವರು ಕೃಷಿಕನಾಗಿ ಯಶಸ್ಸು ಕಂಡಿದ್ದಾರೆ.

ರೇಷ್ಮೆಯಿಂದ ಬಂಗಾರ
ರೇಷ್ಮೆ ಬೆಳೆಗೆ ಕಡಿಮೆ ನೀರು ಸಾಕು. ಹಾಗಾಗಿ ಬೋರ್‌ವೆಲ್‌ ಕೊರಸಿ ಡ್ರಿಪ್‌ ಅಳವಡಿಸಿ ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆಯ ಜೊತೆಯಲ್ಲಿ ಸುತ್ತಲೂ ತೆಂಗಿನ ಮರಗಳಿರುವುದರಿಂದ ಉತ್ತಮ ಲಾಭ. ರೇಷ್ಮೆ ಹುಳುವಿಗೆ ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜೀತಾ, ಸಪ್ಲಿಮೆಂಟರಿ, ಸುರಕ್ಷಾ ಸಂಜೀವಿನಿಯನ್ನು ಬಳಸುತ್ತಾರೆ. ಪ್ರತಿ ದಿನಕ್ಕೆ ಎರಡು ಬಾರಿ ಹುಳುಗಳಿಗೆ ಸೊಪ್ಪನ್ನು ಕತ್ತರಿಸಿ ಹಾಕಿದರೆ, ಹುಳುಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ. ಇದರಿಂದ ಉತ್ತಮ ರೇಷ್ಮೆ ಗೂಡು ಸಿಕ್ಕು ಒಳ್ಳೆಯ ಲಾಭ ಪಡೆಯಬಹುದು ಎನ್ನುತ್ತಾರೆ ಗೋವಿಂದರಾಜು.

100 ಮೊಟ್ಟೆಗಳಿಗೆ 100ಕೆ.ಜಿ ರೇಷ್ಮೆ ಗೂಡನ್ನು ಮಾಡುತ್ತಾರೆ. ಇದೇ ಆಶ್ಚರ್ಯ. ಸಾಮಾನ್ಯವಾಗಿ, 100 ಮೊಟ್ಟೆಗೆ 80 ಕೆ.ಜಿ ಬೆಳೆಯೋದೇ ಹೆಚ್ಚು. ಗೋವಿಂದರಾಜು 100 ಕೆ.ಜಿ ಬೆಳೆಯುವುದರಿಂದ ಕೆ.ಜಿಗೆ ಸರಾಸರಿ ಬೆಲೆ 400ರೂ. ಅಂತಿಟ್ಟುಕೊಂಡರೂ, ನಾಲ್ಕು ಲಕ್ಷ ರೂ. ಆದಾಯ. ಇದರಲ್ಲಿ ಖರ್ಚೆಲ್ಲಾ ತೆಗೆದರೂ ನಿವ್ವಳ ಲಾಭ ಮೂರು ಲಕ್ಷ ಸಿಗುತ್ತದೆ. ವರ್ಷಕ್ಕೆ ಹಿಪ್ಪುನೇರಳೆಯ ನಾಲ್ಕು ಬೆಳೆ ತೆಗೆಯಬಹುದು. ಒಂದು ಎಕರೆಯಲ್ಲಿ 70-80 ಹೊರೆ ಸೊಪ್ಪು ಸಿಗುತ್ತದೆ. ಒಂದು ಪಕ್ಷ ಗೂಡಿನ ಬೆಳೆ ಕೈ ಕೊಟ್ಟರೆ. ತಕ್ಷಣ ಒಂದು ಹೊರೆ ಸೊಪ್ಪಿಗೆ 80 ರೂ.ನಂತೆ ಮಾರಿ ಆದಾಯಕ್ಕೆ ದಾರಿ ಮಾಡಿಕೊಳ್ಳುವ ಗೋವಿಂದರಾಜು, ಈ ಗುಟ್ಟನ್ನು ಇತರೆ ರೈತರಿಗೂ ಹೇಳಿಕೊಡುವುದರೊಂದಿಗೆ ಮಾದರಿಯಾಗಿದ್ದಾರೆ.

ಪಶು ಸಂಗೋಪನೆ:
ಕೃಷಿಯ ಜೊತೆಯಲ್ಲಿಯೇ ಹೈನುಗಾರಿಕೆ ಕೂಡ ಇದೆ. ಇವರ ಬಳಿ ಎಚ್‌ಎಫ್, ಜರ್ಸಿ ತಳಿಯ 11 ಹಸುಗಳಿವೆ. ಹೀಗಾಗಿ, ದಿನಕ್ಕೆ 40 ರಿಂದ 50 ಲೀಟರ್‌ನಷ್ಟು ಹಾಲನ್ನು ಡೈರಿಗೆ ಹಾಕಿ ವಾರ್ಷಿಕ ನಾಲ್ಕೈದು ಲಕ್ಷ ರುಪಾಯಿ ಆದಾಯಗಳಿಸುತ್ತಿದ್ದಾರೆ. ಹಸುಗಳ ಪೋಷಣೆ, ಹಿಂಡಿ, ಬೂಸಾ, ಕ್ಯಾಲ್ಸಿಯಂ ಮುಂತಾದವಕ್ಕೆ ಸರಾಸರಿ ಒಂದೂವರೆ ಲಕ್ಷ ಖರ್ಚು ತೆಗೆದರೆ, ಮೂರರಿಂದ ನಾಲ್ಕು ಲಕ್ಷದವರೆಗೆ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ಗೋವಿಂದರಾಜು ತೋರಿಸಿಕೊಟ್ಟಿದ್ದಾರೆ. ಹಸುಗಳನ್ನು ಮಕ್ಕಳಂತೆ ಸಲಹುವ ಇವರು, ಅವುಗಳನ್ನು ನಿಯಮಿತವಾಗಿ ಆರೈಕೆ ಮಾಡಿ ಅವುಗಳಿಗೆ ಬೇಕಾದ ಹಸಿರ ಮೇವನ್ನು ಒಂದು ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ಜೊತೆಗೆ, ಹಸುಗಳ ಸಗಣಿಯಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ಸಿಂಪಡಣೆ ಮಾಡುತ್ತಾರೆ. ರಾಸಾಯನಿಕ ಗೊಬ್ಬರಗಳ ಬಳಕೆಗಿಂತ ಸಗಣಿ ಗೊಬ್ಬರದ ಬಳಕೆ ಉತ್ತಮ. ಕೆರೆಯಲ್ಲಿ ಸಿಗುವ ಮಣ್ಣನ್ನು ಗೊಬ್ಬರವಾಗಿ ಬಳಸಿ, ಕೊಟ್ಟಿಗೆ ಗೊಬ್ಬರದಿಂದಲೇ ಕಡಿಮೆ ಖರ್ಚು, ಹೆಚ್ಚು ಲಾಭ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Advertisement

-ಲಕ್ಷ್ಮೀಕಾಂತ್‌ ಎಲ್‌

Advertisement

Udayavani is now on Telegram. Click here to join our channel and stay updated with the latest news.

Next