Advertisement

ಸಿಲಿಕಾನ್‌ ಸಿಟಿಗಿಲ್ಲ ಉಚಿತ ವೈ-ಫೈ!

12:09 PM Jul 26, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಉಚಿತ ಬೆಂಗಳೂರು ವೈ-ಫೈ’ ಯೋಜನೆಗೆ ಆರಂಭದಲ್ಲೇ ಹಿನ್ನಡೆಯಾಗಿದ್ದು, ಉಚಿತ ಇಂಟರ್‌ನೆಟ್‌ ಸೇವೆ ನೀಡಲು ಟೆಲಿಕಾಂ ಸಂಸ್ಥೆಗಳು ಹಿಂದೇಟು ಹಾಕಿವೆ.

Advertisement

ಬೆಂಗಳೂರಿನ 400 ಕಡೆ ವೈ-ಫೈ “ಸ್ಮಾರ್ಟ್‌ಪೋಲ್‌’ ಅಳವಡಿಸಿ, ಜನರಿಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವುದು ಸರ್ಕಾರದ ಯೋಜನೆಯಾಗಿತ್ತು. ಆದರೆ, ಸರ್ಕಾರದ ಆಶಯಕ್ಕೆ ಪೂರಕವಾಗಿ ಟೆಲಿಕಾಂ ಸಂಸ್ಥೆಗಳು ಸ್ಪಂದಿಸಿಲ್ಲ.

ಭಾರತದ ಸಿಲಿಕಾನ್‌ ವ್ಯಾಲಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಇಂಟರ್‌ನೆಟ್‌ ಸೇವೆ ಉಚಿತವಾಗಿ ಒದಗಿಸುವ ಉದ್ದೇಶದಿಂದ ಹಿಂದಿನ ಸರ್ಕಾರ ಯೋಜನೆ ಘೋಷಿಸಿ, ಅಗತ್ಯ ಸಹಕಾರ ನೀಡುವುದಾಗಿ ಟೆಲಿಕಾಂ ಸಂಸ್ಥೆಗಳಿಗೆ ಭರವಸೆ ನೀಡಿತ್ತು.

ಅದರಂತೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವ ಸಂಸ್ಥೆಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಲು ಸಹಕಾರ ಹಾಗೂ ಅನುಮತಿ ನೀಡುವಂತೆಯೂ ಸರ್ಕಾರ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು.

ಅದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ, ಸಂಸ್ಥೆಗೆ ಶೀಘ್ರ ಅನುಮತಿ ನೀಡುತ್ತಿದೆ. ಆದರೆ, ಸರ್ಕಾರದಿಂದ ನಿಗದಿಗೊಳಿಸಿದ ನಾಲ್ಕು ಸಂಸ್ಥೆಗಳ ಪೈಕಿ ಒಂದು ಸಂಸ್ಥೆ ಮಾತ್ರ ಸ್ಮಾರ್ಟ್‌ಪೋಲ್‌ ಅಳವಡಿಸಲು ಅನುಮತಿ ಪಡೆದಿದೆ.

Advertisement

60 ಕಡೆ ಪೋಲ್‌ ಅಳವಡಿಕೆ: ನಗರದ 5,938 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಹಾಟ್‌ಸ್ಪಾಟ್‌ಗಳ ಸೃಷ್ಟಿಗಾಗಿ ಇಂಡಸ್‌ ಟವರ್, ಹನಿಕಾಂಬ್‌, ಡಿ-ವೊಯಾಸ್‌ ಹಾಗೂ ಎಸಿಟಿ ಟೆಲಿಕಾಂ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಆದರೆ, ಇಂಡಸ್‌ ಟವರ್ ಸಂಸ್ಥೆ ಮಾತ್ರ ಈವರೆಗೆ ನಗರದ 60 ಕಡೆ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಲು ಪಾಲಿಕೆಯ ಒಎಫ್ಸಿ ವಿಭಾಗದಿಂದ ಅನುಮತಿ ಪಡೆದಿದ್ದು, ಈಗಾಗಲೇ ಹಲವಾರು ಕಡೆಗಳಲ್ಲಿ ಪೋಲ್‌ ಅಳವಡಿಸಿದೆ.

ಪೋಲ್‌ ಇದೆ, ಇಂಟರ್‌ನೆಟ್‌ ಇಲ್ಲ: ಬಿಬಿಎಂಪಿ ಕೇಂದ್ರ ಕಚೇರಿ, ರಾಜಭವನ ರಸ್ತೆ, ಕಸ್ತೂರಬಾ ರಸ್ತೆ ಸೇರಿ ನಗರದ ಹತ್ತಾರು ಕಡೆ ಇಂಡಸ್‌ ಟವರ್ ಸಂಸ್ಥೆ ಉಚಿತ ವೈ-ಫೈ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಿದ್ದು, ಪೋಲ್‌ಗ‌ಳ ಬಳಿ ಸಾರ್ವಜನಿಕರು ವೈ-ಫೈ ಆನ್‌ ಮಾಡಿಕೊಂಡರೆ “ಬೆಂಗಳೂರು ವೈ-ಫೈ’ ಎಂದು ತೋರಿಸುತ್ತದೆ. ಜತೆಗೆ ಇಂಟರ್‌ನೆಟ್‌ ಕನೆಕ್ಟ್ ಆಗಿದೆ ಎಂದು ತೋರಿಸುತ್ತದೆ. ಆದರೆ, ಇಂಟರ್‌ನೆಟ್‌ ಮಾತ್ರ ಲಭ್ಯವಾಗುತ್ತಿಲ್ಲ. ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

ಟೆಲಿಕಾಂ ಸಂಸ್ಥೆಗಳ ನಿರಾಸಕ್ತಿಗೆ ಕಾರಣವೇನು?: ಸ್ಮಾರ್ಟ್‌ಪೋಲ್‌ ಅಳವಡಿಸುವ ಸಂಸ್ಥೆ ಪ್ರತಿ ಪೋಲ್‌ಗೆ 62,000 ರೂ. ಒಎಫ್ಸಿ ಶುಲ್ಕವನ್ನು ಪಾಲಿಕೆಗೆ ಪಾವತಿಸಬೇಕು. ಇದರೊಂದಿಗೆ ಶೇ.18ರಷ್ಟು ಜಿಎಸ್‌ಟಿ ಸೇರಿ ಪ್ರತಿ ಪೋಲ್‌ಗೆ ಒಟ್ಟು 73,160 ರೂ. ಪಾವತಿಸಿದರೆ ಐದು ವರ್ಷಗಳ ಅವಧಿಗೆ ಅನುಮತಿ ನೀಡಲಾಗುತ್ತಿದೆ. ಪೋಲ್‌ ಅಳವಡಿಕೆ ಶುಲ್ಕ ದುಬಾರಿಯಾದ ಕಾರಣ ಟೆಲಿಕಾಂ ಸಂಸ್ಥೆಗಳು ಉಚಿತ ವೈ-ಫೈ ಸೇವೆ ಒದಗಿಸಲು ಹಿಂದೇಟು ಹಾಕುತ್ತಿವೆ ಎನ್ನಲಾಗುತ್ತಿದೆ.

ಯಾವ ಸಂಸ್ಥೆಗೆ ಅವಕಾಶ ನೀಡಬೇಕು ಂಬುದನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯೇ ನಿರ್ಧಾರಿಸುತ್ತದೆ. ಅನುಮತಿ ನೀಡುವ ಕೆಲಸ ಮಾತ್ರ ಪಾಲಿಕೆಯದ್ದು. ಈಗಾಗಲೇ ಹಲವಾರು ಸಂಸ್ಥೆಗಳು ಅನುಮತಿ ಪಡೆಯಲು ಮುಂದೆ ಬಂದಿವೆ. ಸಚಿವರು ಸಹ ಈ ಕುರಿತು ಸಭೆ ನಡೆಸಿದ್ದಾರೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಹಾಟ್‌ಸ್ಪಾರ್ಟ್‌ ಅನುಮತಿ
-ಇಂಡಸ್‌ ಟವರ್    140 
-ಹಾನಿ ಕಾಂಬ್‌    2516 
-ಡಿ-ವೊಯಾಸ್‌    2516 
-ಎಸಿಟಿ    766 
-ಒಟ್ಟು    5938

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next