Advertisement

ಮೂಕ ಹಕ್ಕಿ ಹಾಡುತಿದೆ…

06:00 AM Nov 17, 2017 | Harsha Rao |

“ನಾವು ಬಿರುಗಾಳಿಗೆ ಎದುರಾಗಿ ನಿಂತ ಬುಡ್ಡಿ ದೀಪವಿದ್ದಂತೆ …’
– ಹೀಗೆ ಹೇಳಿ ಕ್ಷಣಕಾಲ ಸುಮ್ಮನಾದರು ಕಥೆಗಾರ ಮತ್ತು ಸಾಹಿತಿ ಕೋಟಗಾನಹಳ್ಳಿ ರಾಮಯ್ಯ. ಅವರು ಹೇಳಿದ್ದು, “ಮೂಕಹಕ್ಕಿ’ ಚಿತ್ರ ಕುರಿತು. ಹಾಗೆ ಹೇಳ್ಳೋಕೆ ಕಾರಣ, “ಮೂಕ ಜನಾಂಗದ ಕಥೆಯೊಂದು ಚಿತ್ರವಾಗಿ, ಆ ಜನಾಂಗಗಳ ಬದುಕನ್ನು ಅನಾವರಣಗೊಳಿಸುತ್ತಿರುವ “ಮೂಕಹಕ್ಕಿ’ ಎದುರು ಕಮರ್ಷಿಯಲ್‌ ಹೆಸರಿನ ಚಿತ್ರಗಳು ನುಗ್ಗುತ್ತಿವೆ. ಅವೊಂಥರಾ ಬಿರುಗಾಳಿ ಇದ್ದಂತೆ. ನಮ್ಮ “ಮೂಕಹಕ್ಕಿ’ ಬಿರುಗಾಳಿಗೆ ಎದುರಾಗಿ ನಿಂತ ಬುಡ್ಡಿ ದೀಪ ಇದ್ದಂತೆ’ ಎನ್ನುತ್ತಲೇ ಸಿನಿಮಾ ಕುರಿತು ಹೇಳುತ್ತಾ ಹೋದರು ರಾಮಯ್ಯ.

Advertisement

“ಈಗಂತೂ ನಿಜ ಬದುಕು ಮುಖ್ಯವಾಹಿನಿಗೆ ಬರುತ್ತಿಲ್ಲ. ಅದರಲ್ಲೂ ದೃಶ್ಯಮಾಧ್ಯಮದಿಂದ ಬಲು ದೂರವೇ ಉಳಿದಿದೆ. ಲಾಂಗು, ಮಚ್ಚು ಆರ್ಭಟ ಚಿತ್ರಗಳಲ್ಲಿ ನಗರೀಕರಣದ ಬದುಕೇ ಪ್ರತಿನಿಧಿಸುತ್ತಿದೆ. ಕಾರ್ಪೋರೇಟ್‌ ಲೈಫ್ಶೈಲಿಗೆ ಗ್ರಾಮೀಣ ಬದುಕು ಬರಡಾಗಿದೆ. “ಸಂಸ್ಕಾರ’, “ಕಾಡು’ ಮೂಲಕ ಆರಂಭವಾದ ಚಳವಳಿ ಈಗ ಬಲಿಯಾಗಿದೆ. ಅಂತಹ ಸಂವೇದನೆಯನ್ನು ಈಗ ತೆರೆಮೇಲೆ ತರೋದು ಕಷ್ಟವಾಗುತ್ತಿದೆ. ಆದರೂ, ಈಗ ನಿರ್ಮಾಪಕರು ಧೈರ್ಯ ಮಾಡಿ, ಕಾಣದ ಬದುಕಿನ ವೇದನೆಯನ್ನು ತೆರೆಗೆ ತರುತ್ತಿದ್ದಾರೆ. ಇದನ್ನು ಕಲಾತ್ಮಕ ಎಂಬ ವರ್ಗೀಕರಣಕ್ಕೆ ಸೇರಿಸುವಂತಿಲ್ಲ. ನನ್ನ ಪ್ರಕಾರ ಸಿನಿಮಾ, ಸಿನಿಮಾ ಅಷ್ಟೇ. ಇಲ್ಲಿ ಕಥೆ ಕೊಟ್ಟಿದ್ದೇನೆ. ಹಾಡು ಕಟ್ಟಿಕೊಟ್ಟಿದ್ದೇನೆ. ಜನಪದನೀಯ ಚಿತ್ರವಿದು. ಸಹಜ ನಟರೇ ತುಂಬಿದ್ದಾರೆ. ಒಂದು ಜನಾಂಗದ ನೋವನ್ನು ತೆರೆ ಮೇಲೆ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಬುಡ್ಡಿದೀಪವನ್ನು ಆರದಂತೆ ನೋಡಿಕೊಳ್ಳೋದು ಜನರ ಜವಾಬ್ದಾರಿ’ ಅಂದರು ರಾಮಯ್ಯ.

ಇಲ್ಲಿ “ತಿಥಿ’ ಖ್ಯಾತಿಯ ಪೂಜಾ ನಾಯಕಿ. ಅವರೇ ಹೇಳುವಂತೆ, “ನಾನು ನಾಯಕಿ ಅಲ್ಲ, ನಟಿಯಷ್ಟೇ. ನನ್ನ ವೃತ್ತಿ ಬದುಕಿನ ಅತಿ ಮುಖ್ಯವಾದ ಚಿತ್ರವಿದು. ನಾನಿಲ್ಲಿ ಗೌರಿ ಪಾತ್ರ ನಿರ್ವಹಿಸಿದ್ದೇನೆ. ಇಲ್ಲಿ ಮತ್ತೂಂದು ಹೊಸ ಇಮೇಜ್‌ ಸಿಗುವ ನಿರೀಕ್ಷೆ ನನ್ನದು. ಇಲ್ಲಿ ಎಲ್ಲರೂ ಹೊಸದೇನನ್ನೋ ಪ್ರಯೋಗ ಮಾಡಿದ್ದಾರೆ. ಅದನ್ನು ಜನ ಸ್ವೀಕರಿಸುತ್ತಾರೆಂಬ ವಿಶ್ವಾಸ ನನ್ನದು’ ಅಂದರು ಪೂಜಾ. ರಂಗಭೂಮಿ ಕಲಾವಿದ ಸಂಪತ್‌ಗೆ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ.

“ಒಂದು ಜನಾಂಗದ ಪರಂಪರೆ ಬಿಂಬಿಸುವ ಚಿತ್ರ ಇದಾಗಿರುವುದರಿಂದ, ಇಲ್ಲಿ ಅಲೆಮಾರಿ ಜನಾಂಗವನ್ನು ಪ್ರತಿನಿಧಿಸುವ ಪಾತ್ರ ಮಾಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿಯೂ ನಡೆದಿದೆ. ರಾಮಯ್ಯ ಅವರು ಕಥೆ ಬರೆಯುತ್ತಾರೆ ಅಂದಾಗ ಖುಷಿಯಾಯ್ತು. ಅವರು ಅದ್ಯಾವುದೋ ಬೆಟ್ಟದಲ್ಲಿದ್ದರು. ಅವರನ್ನು ಹುಡುಕಿ ಹೋಗಿ ಕಥೆ, ಚಿತ್ರಕಥೆ ಬಗ್ಗೆ ಚರ್ಚಿಸಿದ್ದೇವೆ. ಕೋಲೆ ಬಸವ, ಹಾವಾಡಿಗರು ಇತ್ಯಾದಿ ಜನಪದ ವ್ಯಕ್ತಿಗಳು ಸುಗ್ಗಿ ಕಾಲದಲ್ಲಿ ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಆ ಜನಾಂಗ ಮರೆಯಾಗುತ್ತಿದೆ. ಅಂಥದ್ದೊಂದು ಕಥೆ ಇಲ್ಲಿದೆ’ ಎಂದರು ಸಂಪತ್‌.

ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ, ಛಾಯಾಗ್ರಹಕ ಚಿದಾನಂದ್‌, ನಿರ್ಮಾಪಕಿ ಚಂದ್ರಕಲಾ, ನಿರ್ದೇಶಕ ನೀನಾಸಂ ಮಂಜು ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next