ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಸಿಖ್ ಯುವತಿಯರನ್ನು ಅಪಹರಿಸಿ, ಮತಾಂತರಗೊಳಿಸಿದ ನಂತರ ಬಲವಂತದಿಂದ ವಯಸ್ಸಾದ ವ್ಯಕ್ತಿಗಳ ಜತೆ ವಿವಾಹ ನಡೆಸುತ್ತಿರುವ ಘಟನೆ ವಿರುದ್ಧ ಸಿಖ್ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೇ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಕಿಡ್ನಾಪ್, ಮತಾಂತರದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನವೆಂಬರ್ ನಲ್ಲೇ ರೇಖಾ ಹತ್ಯೆಗೆ ಸಂಚು: ಆರೋಪಿ ಅರುಳ್‌ನಿಂದ ಜೈಲಿನಲ್ಲೇ ಹತ್ಯೆಗೆ ನಿರ್ಧಾರ
ಶ್ರೀನಗರದಲ್ಲಿ ಸಿಖ್ ಸಮುದಾಯದ 18 ವರ್ಷದ ವಿಕಲಚೇತನ ಯುವತಿಯನ್ನು ಬಲವಂತದಿಂದ ಬೇರೆ ಧರ್ಮದ ವ್ಯಕ್ತಿ ಜತೆ ವಿವಾಹ ನಡೆಸಿ ಮತ್ತು ಮತಾಂತರಗೊಳಿಸಿದ ಘಟನೆ ವಿರೋಧಿಸಿ ಸಿಖ್ ಸಮುದಾಯ ಪ್ರತಿಭಟನೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಪೊಲೀಸರಿಗೆ ದೂರು ನೀಡಿದ ನಂತರ ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದು, ಭಾನುವಾರ (ಜೂನ್ 27) ಅಪಹರಣದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಯುವತಿ ಕೋರ್ಟ್ ನಲ್ಲಿ ತಾನು ತನ್ನ ಸ್ವ ಇಚ್ಛೆಯಿಂದ ಆತನನ್ನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಆದರೆ ಕೋರ್ಟ್ ನಲ್ಲಿ ತಮ್ಮ ಮಗಳು ಹೇಳಿಕೆಯನ್ನು ನೀಡುವ ಸಂದರ್ಭದಲ್ಲಿ ನಮಗೆ ಒಳಪ್ರವೇಶಿಸಲು ಪೊಲೀಸರು ಅವಕಾಶ ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದು, ಆಕೆ ಮೇಲೆ ಪ್ರಭಾವ ಬೀರಿದ್ದ ಹಿನ್ನೆಲೆಯಲ್ಲಿ ಸ್ವ ಇಚ್ಛೆಯಿಂದ ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದಾಳೆಂದು ದೂರಿದ್ದಾರೆ.
ಜಮ್ಮು ಮತ್ತು ಶ್ರೀನಗರದಲ್ಲಿ ಈಗಾಗಲೇ ಇಂತಹ ನಾಲ್ಕು ಪ್ರಕರಣ ನಡೆದಿದೆ ಎಂದು ಅಕಾಲಿ ದಳ್ ಮುಖಂಡ ಮನ್ ಜಿಂದರ್ ಸಿಂಗ್
ಆರೋಪಿಸಿದ್ದು, ಏತನ್ಮಧ್ಯೆ ಪೊಲೀಸರು ಈ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ. ಒಂದು ಪ್ರಕರಣ ಮಾತ್ರ ನಡೆದಿದ್ದು, ಉಳಿದ ಮೂರು ಘಟನೆಗಳ ಬಗ್ಗೆ ನಮಗೆ ಎಲ್ಲಿಯೂ ಪುರಾವೆ ಸಿಕ್ಕಿಲ್ಲ ಎಂದು ಹೇಳುತ್ತಿರುವುದಾಗಿ ಸಿಖ್ ಸಮುದಾಯ ಆರೋಪಿಸಿದೆ.