ಸಾಗರ: ತಾಲೂಕಿನ ಸಿಗಂದೂರು ಶ್ರೀಕ್ಷೇತ್ರದಲ್ಲಿ ಕೋವಿಡ್ ನಿಯಮ ಅನುಸರಿಸಿ ಎರಡು ದಿನಗಳ ಸಂಕ್ರಮಣದ ಹಬ್ಬಕ್ಕೆ ಗುರುವಾರ ಚಾಲನೆ ನೀಡಲಾಯಿತು. ಬೆಳಗ್ಗೆ 5 ಗಂಟೆಗೆ ಅಲಂಕಾರ ಶೋಭಿತ ದೇವಿಗೆ ವಿಶೇಷ ಪೂಜೆ ನಡೆಸಲಾಯಿತು.
ಧರ್ಮದರ್ಶಿ ಡಾ| ರಾಮಪ್ಪ ಅವರ ಜೊತೆಗೆ ಸಾಧಕ ವೈದ್ಯ ಡಾ| ಶಿವಾನಂದ ಮೂಲ ಸ್ಥಳದಿಂದ ಜ್ಯೋತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆಗೆದುಕೊಂಡು ಬಂದರು. ಈ ವೇಳೆ ಕರೂರು ಹೋಬಳಿಯ ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ದೇವಿಯ ಜ್ಯೋತಿಯನ್ನು ಸ್ವಾಗತಿಸಿದರು.
ಜ್ಯೋತಿಯ ಮೆರವಣಿಗೆ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು. ದೇವಿಗೆ ಪೂಜೆ ಸಲ್ಲಿಸಿದ ಭಕ್ತರು ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸಿದರು. ರಾತ್ರಿ ಸಿಗಂದೂರು ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಇದನ್ನೂ ಓದಿ:ಹಕ್ಕಿನೊಂದಿಗೆ ಕರ್ತವ್ಯವನ್ನೂ ನಿಭಾಯಿಸಿ
ಜಾತ್ರೆಯ ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ 5ಕ್ಕೆ ವಿವಿಧ ಆಭರಣ ಪೂಜೆ ಹಾಗೂ ದೇವಿಗೆ ಮಧ್ಯಾಹ್ನ ವಿಶೇಷ ಪೂಜೆ ನಡೆಯಲಿದೆ. ಸಂಜೆ 5 ಗಂಟೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಹಾಗೂ ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಅಂಕ ತೆಗೆದ ಕರೂರು ಹೋಬಳಿಯ ಮಕ್ಕಳಿಗೆ ಸನ್ಮಾನಿಸಲಾಗುವುದು ಎಂದು ಶ್ರೀಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ತಿಳಿಸಿದ್ದಾರೆ