ಎಚ್.ಡಿ.ಕೋಟೆ: ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸದೆ ಇದ್ದರೆ, ಮುಂದೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪ್ರಗತಿಪರ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು. 40 ವರ್ಷ ಹಿಂದೆ ಎಸ್ಸಿ, ಎಸ್ಟಿಗೆ ಇದ್ದಷ್ಟೇ ಮೀಸಲಾತಿ ಮುಂದುವರಿಯುತ್ತಿದೆ. ರಾಜ್ಯದಲ್ಲಿ ಶೇ.3 ಜನಸಂಖ್ಯೆ ಇರುವವರಿಗೆ ಸರ್ಕಾರ ಶೇ.10 ಮೀಸಲಾತಿ ನೀಡಿದೆ ಎಂದು ಹೇಳಿದರು.
2 ವರ್ಷ ಹಿಂದೆ ವರದಿ ಸಲ್ಲಿಕೆ: ಬಹುಸಂಖ್ಯೆಯಲ್ಲಿರುವ ಎಸ್ಸಿ ಎಸ್ಟಿ, ಒಬಿಸಿಗೆ ಮೊದಲಿದ್ದ ಮೀಸಲಾತಿ ಮುಂದುವರಿಯುತ್ತಿದೆ. ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರವೇ ನಿಯೋಜಿಸಿದ ನ್ಯಾ.ನಾಗಭೂಷಣ್ ಆಯೋಗ ಎಸ್ಸಿಗೆ ಶೇ.17, ಎಸ್ಟಿಗೆ ಶೇ.7.5 ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ 2 ವರ್ಷ ಹಿಂದೆಯೇ ವರದಿ ಸಲ್ಲಿಸಿದೆ. ಆದರೆ, ಕಣ್ಣು, ಮೂಗು, ಬಾಯಿ ಇಲ್ಲದ ಸರ್ಕಾರ ಬಹುಸಂಖ್ಯೆಯಲ್ಲಿರುವ ಸಮುದಾಯಗಳ ಬೇಡಿಕೆ ತಿರಸ್ಕರಿಸಿದೆ ಎಂದು ದೂರಿದರು.
ಸರ್ಕಾರಕ್ಕೆ ಎಚ್ಚರಿಕೆ: ಮೀಸಲಾತಿ ಹೆಚ್ಚಳಕ್ಕೆ ಸರ್ಕಾರವನ್ನು ಒತ್ತಾಯಿಸಿ ಪ್ರಸನ್ನಾನಂದ ಶ್ರೀಗಳು 100 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದರೂ, ಸರ್ಕಾರ ಸಮಸ್ಯೆ ಪರಿಹರಿಸಿಲ್ಲ. ಶ್ರೀಗಳ ಬೆಂಬಲವಾಗಿ ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಆರೋಪಿಸಿದರು.
ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ತಾಲೂಕು ಆದಿಕರ್ನಾಟಕ ಮಹಾಸಭಾಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಆದಿ ಜಾಬಂಬ ಸಮುದಾಯದ ಶಿವಯ್ಯ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಂ.ಸಿ.ದೊಡ್ಡನಾಯ್ಕ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಮಾತನಾಡಿದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಪಟ್ಟಣದ ಶ್ರೀಲಕ್ಷ್ಮೀವರದಾಜಸ್ವಾಮಿ ದೇವಸ್ಥಾನದ ಬಳಿಯಿಂದ 1ನೇ ಮುಖ್ಯರಸ್ತೆ ಮಾರ್ಗವಾಗಿ ಎಚ್ .ಬಿ.ರಸ್ತೆ ತಲುಪಿ, ಅಲ್ಲಿಂದ ಮಿನಿವಿಧಾನಸೌಧ ತಲುಪಿದರು. ರಸ್ತೆಯುದ್ದಕ್ಕೂ ಸರ್ಕಾರದ ನಿರ್ಲಕ್ಷತನದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಮುದ್ದಮಲ್ಲಯ್ಯ, ಮಧುಕುಮಾರ್, ಹೊಂಡ
ನಯಾಜ್, ಪರಶಿವಮೂರ್ತಿ, ಚಾಕಳ್ಳಿ ಕೃಷ್ಣ, ಚಿಕ್ಕವೀರನಾಯ್ಕ, ಭಾಗ್ಯಲಕ್ಷ್ಮೀ, ಕ್ಯಾತನಹಳ್ಳಿ ನಾಗರಾಜು, ಈರೇಗೌಡ, ಜಯಪ್ರಕಾಶ್, ಎಸ್ .ಸಿ.ಮಂಜುನಾಥ್ ಇತರರಿದ್ದರು.