ಪಂಜಾಬ್: ಪಂಚರಾಜ್ಯಗಳ ಚುನಾವಣಾ ಸಿದ್ಧತೆಯ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ತೆರಳಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಮರ್ಥಿಸಿಕೊಂಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯ ಜತೆ ಭಿನ್ನಾಭಿಪ್ರಾಯ ಹೊಂದಿರುವ ಸಿಧು ಈಗ ಏಕಾಏಕಿ ಹೈಕಮಾಂಡ್ ಪರ ವಾಲಿಕೊಂಡಿದ್ದು, ರಾಹುಲ್ ವಿರುದ್ಧ ಕೇಳಿ ಬರುತ್ತಿದ್ದ ಟೀಕೆಗೆ ಬಹಿರಂಗ ಸಮರ್ಥನೆ ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿರುವ ಅವರು, ಯಾರೂ ರಜಾ ತೆಗೆದುಕೊಳ್ಳುವುದೇ ಇಲ್ಲ. ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಯಾಕೆ ಟೀಕಿಸಬೇಕು.
ಅವರ ನೇತೃತ್ವದಲ್ಲೇ ಪಂಜಾಬ್‍ನಲ್ಲಿ ಕಾಂಗ್ರೆಸ್ 76 ಸ್ಥಾನಗಳನ್ನು ಗೆದ್ದಿದೆ. 8 ಕಾಂಗ್ರೆಸ್ ಸಂಸದರು ಇದ್ದಾರೆ. ರಾಹುಲ್ ಗಾಂಧಿ ಯಾವಾಗ ಬೇಕಾದರೂ ಪಂಜಾಬಿಗೆ ಬರಲು ಸ್ವತಂತ್ರರು. ಆ.3ರ ರ್ಯಾಲಿಗೆ ಬರುತ್ತೇನೆ ಎಂದು ಅವರು ನಮಗೆ ಕಾಲಾವಕಾಶ ನೀಡಿರಲೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶ ಬದಲಿಸುತ್ತಾರೆ :
ಗಾಂಧಿ ಕುಟುಂಬ ಸುಸಂಸ್ಕೃತ ಕುಟುಂಬ. ಯಾವುದೇ ರಾಜ್ಯದ ಅಧಿಕಾರದಲ್ಲಿ ಅನಗತ್ಯ ಮೂಗು ತೂರಿಸುವುದಕ್ಕೆ ಅವರು ಹೋಗುವುದಿಲ್ಲ. ಪಂಜಾಬ್ ರಾಜಕೀಯದಲ್ಲೂ ಅವರು ಹಸ್ತಕ್ಷೇಪ ಮಾಡಿಲ್ಲ. ನೋಡುತ್ತಾ ಇರಿ ರಾಹುಲ್ ಗಾಂಧಿ ಭವಿಷ್ಯದಲ್ಲಿ ದೇಶವನ್ನು ಬದಲಾಯಿಸುತ್ತಾರೆ ಎಂದು ಗುಣಗಾನ ಮಾಡಿದ್ದಾರೆ.
ಕಾಂಗ್ರೆಸ್‍ನ ಒಳಜಗಳ ಹಾಗೂ ರಾಹುಲ್ ಗಾಂಧಿ ಪ್ರವಾಸದ ಮಧ್ಯೆಯೇ ಬಿಜೆಪಿ ತನ್ನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಆನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ಆದರೆ ರಾಹುಲ್ ಗಾಂಧಿ ಆಗಮನ ಎಂದು ? ಎಂಬ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಇಲ್ಲ.