ಬೆಂಗಳೂರು: ರಾಜ್ಯಕ್ಕೆ ಪದೇಪದೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 13 ಪ್ರಶ್ನೆಗಳನ್ನು ಕೇಳಿದ್ದು, “ಉತ್ತರ ಕೊಡಿ ಮೋದಿ’ ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಕೊರೊನಾ ವೇಳೆ ಸ್ಯಾನಿಟೈಸರ್, ಮಾಸ್ಕ್, ವೆಂಟಿಲೇಟರ್‌ನಲ್ಲೂ 3 ಸಾವಿರ ಕೋ. ರೂ. ಅವ್ಯವಹಾರ ನಡೆದಿದೆ. ಹಾದಿ ಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿ ಕಾಯುತ್ತಿವೆ, ಕೋವಿಡ್ ವೇಳೆ ಅಗತ್ಯ ಸಲಕರಣೆ ಪೂರೈಸಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ಬಿಜೆಪಿ ಸರಕಾರ ಬಿಲ್ ಪಾವತಿಸದೆ ಇರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಪ್ರಾಣ ಉಳಿಸಬೇಕಾದವರು ನೀವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಲೆ ಕುಸಿತ, ಬಿತ್ತನೆ ಬೀಜ ಹಾಗೂ ಗೊಬ್ಬರದ ಬೆಲೆ ಹೆಚ್ಚಳದಿಂದ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ಧಾರೆ. ರೈತರಿಗೆ ನೆರವಾಗುವ ಯೋಜನೆಗಳನ್ನು ಸ್ಥಗಿತಗೊಳಿಸಿ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೀರಾ? ಬಾಯಲ್ಲಿ ರೈತರ ಗುಣಗಾನ ಮಾಡುವ ನೀವು ಬಜೆಟ್‌ನಲ್ಲಿ ಮಾಡಿದ್ದೇನು? ಬೆಂಬಲ ಬೆಲೆಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಲಾಗಿದೆ. ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇವೆ ಎಂದು ಬುರುಡೆ ಬಿಟ್ಟು ಅಧಿಕಾರಕ್ಕೆ ಬಂದಿರುವ ಮೋದಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು 50,121 ಕೋಟಿ ರೂ.ಗೆ ಇಳಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ತನ್ನ ಸಾವಿನ ಮೂಲಕ ಬಿಜೆಪಿಗೆ ಭರ್ಜರಿ ರಾಜಕೀಯ ಲಾಭ ಮಾಡಿಕೊಟ್ಟ ಪರೇಶ್ ಮೇಸ್ತಾನ ವಯೋವೃದ್ಧ ತಂದೆ, ತಾಯಿ ಕುಟುಂಬಕ್ಕೆ ನ್ಯಾಯ ಬೇಕು, ಪಿಎಸ್‌ಐ ನೇಮಕಾತಿ ಹಗರಣವೂ ಸೇರಿ ಲೋಕೋಪಯೋಗಿ ಎಂಜಿನಿಯರುಗಳ ನೇಮಕಾತಿಯಲ್ಲಿನ ಹಗರಣದಲ್ಲಿ ಕೆಲಸದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಿ ಮೋದಿ ಯವರೇ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ಧಾರೆ.
40 ಪರ್ಸೆಂಟ್ ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕಾಮಗಾರಿಯ ಹಣವನ್ನು ನೀಡದೆ ಸತಾಯಿಸಿದ ಬಿಜೆಪಿ ಸರಕಾರದ ಹಣದಾಸೆಗೆ ಗುತ್ತಿಗೆದಾರ ಪ್ರಸಾದ್ ಹಾಗೂ ಸಂತೋಷ್ ಪಾಟೀಲ್ ಬಲಿಯಾದರು. ಈ ಸಾವಿನ ಸರಣಿಯನ್ನು ಕೊನೆಗಾಣಿಸುವವರು ಯಾರು ಎಂದು ಸಿದ್ದು ಪ್ರಶ್ನಿಸಿದ್ದಾರೆ.