Advertisement

ಸಿದ್ದು ರಾಜಕೀಯ ಅಂತ್ಯಕಾಲ ಸನ್ನಿಹಿತ

11:07 AM May 07, 2018 | |

ಬೀದರ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ಮುಗಿಯುವ ಹಂತದಲ್ಲಿದೆ. ನನ್ನ ವಿರುದ್ಧ ಅವರು ಏಕ ವಚನದ ಶಬ್ದಗಳನ್ನು ಬಳಸಿದ್ದಾರೆ. ಆದರೆ, ನಾನು ಲಘು ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ರವಿವಾರ ನಡೆದ ಜೆಡಿಎಸ್‌-ಬಿಎಸ್‌ಪಿ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲೇ ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಸತ್ಯಕ್ಕೆ ದೂರವಾದ ಹತ್ತು ಹಲವಾರು ವಿಷಯಗಳನ್ನು ಮಾತನಾಡುತ್ತಿದ್ದಾರೆ. ಹಿಂದೆ ನಿನ್ನ ಅಪ್ಪನಾಣೆ ಸಿಎಂ ಆಗಲ್ಲ ಎಂದು ಕುಮಾರಸ್ವಾಮಿಗೆ ಬಗ್ಗೆ ಲಘುವಾಗಿ ಮಾತನಾಡಿದ್ದರು. ಆದರೆ, ಅದು ನಿಜವಲ್ಲ ಎಂಬುದಕ್ಕೆ ಜನಸ್ತೋಮದ ಬೆಂಬಲವೇ ಸಾಕ್ಷಿ ಎಂದರು.

ಕುಮಾರಸ್ವಾಮಿ ಅವರಲ್ಲಿ ನಾಯಕತ್ವ ಬೆಳೆದದ್ದು ನನ್ನಿಂದ ಅಲ್ಲ. ಬದಲಾಗಿ ಜಾತ್ಯತೀತವಾದ ಪಕ್ಷ ಜೆಡಿಎಸ್‌ನಿಂದ. ಈ ಹಿಂದೆ ಮಿರಾಜುದ್ದೀನ್‌ ಪಟೇಲ್‌, ಇಬ್ರಾಹಿಂ, ಮಂಜುನಾಥ ಮತ್ತು ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಹಾಗಾಗಿ ಜೆಡಿಎಸ್‌ ಎಂದಿಗೂ ಕುಟುಂಬ ರಾಜಕಾರಣ ಮಾಡಿರುವ ಪಕ್ಷವಲ್ಲ. ಮೋದಿ ಅವರಿಗೆ ಚುನಾವಣೆ ದಿನ ಸಮೀಪಿಸಿದಾಗ ಮಹದಾಯಿ ವಿಷಯ ಮತ್ತು ರೈತರ ಸಂಕಷ್ಟ ನೆನಪಿಗೆ ಬಂದಿದೆ. ಹಿಂದೆ ಪ್ರಧಾನಿಗಳನ್ನು ಭೇಟಿ ಮಾಡಿ ಕುಡಿಯುವ ನೀರು ಕೊಡಿ ಎಂದು ಕೇಳಿಕೊಂಡಾಗ ಚಕಾರ ಎತ್ತದ ಮೋದಿ, ಈಗ ಮಹದಾಯಿ ನದಿ ವಿವಾದ ವಿಷಯದಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
 
ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾಕ್ಕಾಗಿ ಕುಮಾರಸ್ವಾಮಿ ಸದನದಲ್ಲಿ ಹೋರಾಟ ಮಾಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಜಗದೀಶ ಶೆಟ್ಟರ ಇದು ಸಾಧ್ಯವಿಲ್ಲ. ಮುಂದೆ ನೀವು ಮುಖ್ಯಮಂತ್ರಿ ಆಗುವುದಿಲ್ಲ, ಅದಕ್ಕಾಗಿ ಸಾಲ ಮನ್ನಾಗೆ ಆಗ್ರಹಿಸುತ್ತಿದ್ದೀರಿ ಎಂದು ಹೇಳಿದ್ದರು. ಆದರೆ, ಈಗ ಕುಮಾರಸ್ವಾಮಿ ಕಾಳಜಿ ಅರ್ಥ ಮಾಡಿಕೊಂಡು ಬಿಜೆಪಿ ಸಹ ಅಧಿಕಾರಕ್ಕೆ ಬಂದ ಮರು ಕ್ಷಣದಲ್ಲೇ ಎಲ್ಲ ರೈತರ ಸಾಲ ಮನ್ನಾ ಮಾಡುವ ಬಗ್ಗೆ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದೆ. ಇನ್ನೊಂದೆಡೆ ರಾಹುಲ್‌ ಗಾಂಧಿ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರದ ರಚನೆಯಾದರೆ ಸಾಲ ಮನ್ನಾ ಮಾಡುವ ಮಾತುಗಳನ್ನಾಡಿದ್ದಾರೆ. ಇದು ಅವರ ಕನಸಿನ ಮಾತಾಗಿದ್ದು, ಅವರಿಗೆ ದೇಶದ ವ್ಯವಸ್ಥೆಯ ಜ್ಞಾನವೇ ಇಲ್ಲ ಎಂದರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಹಿಂದೆ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಗ್ರಾಮ ವಾಸ್ತವ್ಯ, ಸುವರ್ಣ ಗ್ರಾಮ, ಲಾಟರಿ- ಸರಾಯಿ ನಿಷೇಧದಂಥ ಜನಪರ ಕೆಲಸ ಮಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತದಿಂದ ಬೇಸತ್ತಿರುವ ರಾಜ್ಯ ಜನತೆ ಈ ಬಾರಿ ಜೆಡಿಎಸ್‌- ಬಿಎಸ್‌ಪಿ ಮೈತ್ರಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ವಿಷಯದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಸಮಾವೇಶದಲ್ಲಿ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ, ಪಿಜಿಆರ್‌ ಸಿಂಧ್ಯಾ, ಪ್ರಮಖರಾದ ದನೀಶ್‌ ಅಲಿ, ಸಿದ್ದಾರ್ಥ, ಮಾರಸಂದ್ರ ಮುನಿಯಪ್ಪ, ಪ್ರಕಾಶ ಖಂಡ್ರೆ, ನಸೀಮ್‌ ಪಟೇಲ್‌, ಸಂಜಯ ಖೇಣಿ, ದತ್ತು ಸೂರ್ಯವಂಶಿ, ಧನಾಜಿ ಜಾಧವ ಮತ್ತು ರಮೇಶ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next