Advertisement

ದೇಶಕ್ಕೆ ಅಂಟಿರುವ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರದ ಸಂಕಲ್ಪ ಸಿದ್ಧಿ

11:20 AM Aug 13, 2017 | |

ಬೆಂಗಳೂರು: ಭಾರತವನ್ನು 2022ರ ಹೊತ್ತಿಗೆ ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಮತಾಂಧತೆ ಹಾಗೂ ಜಾತೀಯತೆಯಿಂದ ಮುಕ್ತಗೊಳಿಸುವ ಪ್ರತಿಜ್ಞೆಯಯನ್ನು ಶಾಲಾ ಮಕ್ಕಳಿಂದ ಮಾಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ “ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮ ರೂಪಿಸಿದೆ.

Advertisement

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಆಗಸ್ಟ್‌ 15ಕ್ಕೆ 70 ವರ್ಷಪೂರ್ಣಗೊಳ್ಳಲಿದೆ. ಹಾಗೆಯೇ ಗಾಂಧೀಜಿಯರು ಆಗಸ್ಟ್‌ 9ರಂದು  ಬ್ರಿಟಿಷರಿಗೆ ಕರೆಕೊಟ್ಟಿದ್ದ ಕ್ವಿಟ್‌ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿಗೆ ಈಗ 75 ವರ್ಷವಾಗಿದೆ. ಕ್ವಿಟ್‌ ಇಂಡಿಯಾ ಚಳವಳಿಯ ನೆನಪನ್ನು ಹಬ್ಬದ ರೀತಿಯಲ್ಲಿ ದೇಶಾದ್ಯಂತ ಆಚರಿಸಿ, ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲು  ಈ  ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಗಸ್ಟ್‌ 30ರ ತನಕವೂ ಇದು ನಡೆಯಲಿದೆ.

ಸಂಕಲ್ಪ ಸಿದ್ಧಿ ಕಾರ್ಯಕ್ರಮವನ್ನು ಚಳವಳಿಯ ರೂಪದಲ್ಲಿ ಮಾಡುವಂತೆ ಎಲ್ಲ ರಾಜ್ಯದ ಶಿಕ್ಷಣ ಇಲಾಖೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಿಂದ ಸೂಚನೆ ಬಂದಿದೆ. ನವ ಭಾರತದ ದೃಷ್ಟಿಕೋನವಾದ ಸ್ವತ್ಛ ಭಾರತದ ಪರಿಕಲ್ಪನೆಯನ್ನು ಜನರಿಗೆ ಅರ್ಥೈಸುವುದು ಮತ್ತು ದೇಶವನ್ನು ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಮತಾಂಧತೆ ಹಾಗೂ ಜಾತೀಯತೆಯಿಂದ ಮುಕ್ತ ಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲು ನಿರ್ದೇಶಿಸಿದೆ.  ಹೀಗಾಗಿ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾರ್ಯಕ್ರಮಕ್ಕೆ ಸಜ್ಜಾಗಿದೆ. 

ಶಿಕ್ಷಣ ಸಂಸ್ಥೆಗೆ ಸೂಚನೆ: ರಾಜ್ಯದ ಪ್ರತಿ ಶಾಲೆಯಲ್ಲೂ ಆ.30ರ ವರಗೂ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಕಾರ್ಯಕ್ರಮದ ಅಂಗವಾಗಿ ಯುದ್ಧ ಸ್ಮಾರಕ, ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮಾರಕದ ಬಳಿ ಅಥವಾ ಯುದ್ಧ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡಿ ಹುತಾತ್ಮರ ನೆನಪಿನಲ್ಲಿ ರಚಿಸಿರುವ ಸ್ಮಾರಕದ ಬಳಿ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮ ಆಯೋಜಿಸಬೇಕು. ಇಂಥ ಸ್ಥಳ ಲಭ್ಯವಿಲ್ಲದೇ ಇದ್ದರೆ ಶಾಲೆಯಲ್ಲೇ ಕಡ್ಡಾಯವಾಗಿ ಸಂಕಲ್ಪ ದಿನ ನಡೆಸಬೇಕು ಎಂದು ಖಡಕ್‌ ಸೂಚನೆ ನೀಡಿದೆ.

ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಸಮೇತವಾಗಿ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿ, ಅಂದು ಸ್ವತ್ಛಕ್ಕೆ ಪೂರಕವಾದ ಕೆಲಸ ಮಾಡಬೇಕು. ಹಾಗೆಯೇ, ದೇಶಕ್ಕೆ ದೊಡ್ಡ ಪೀಡುಗಾಗಿರುವ ಬಡತನ, ಭಯೋತ್ಪಾದನೆ, ಭ್ರಷ್ಟಾಚಾರ ಮೊದಲಾದ ಅನಿಷ್ಠ ಪದ್ಧತಿಯನ್ನು 2022ರ ವೇಳೆಗೆ  ನಿರ್ಮೂಲನೆ ಮಾಡುವ ಸಂಬಂಧ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಪಡೆಯಬೇಕು.

Advertisement

ಸ್ಥಳೀಯ, ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮರ ಭಾವಚಿತ್ರವನ್ನು ಶಾಲೆಗಳಲ್ಲಿ ಸ್ಥಾಪಿಸಬೇಕು. ದೇಶಕ್ಕೆ ಅಂಟಿಕೊಂಡಿರುವ ಭಯಾನಕ ಸಮಸ್ಯೆಯ ಪರಿಹಾರದ ಕುರಿತು ವಿದ್ಯಾರ್ಥಿಗಳಿಗೆ ಸಂದೇಶ ನೀಡಲು ಶಿಕ್ಷಣ ಸಂಸ್ಥೆಗೆ ನಿರ್ದೇಶಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಸಪ್ರಶ್ನೆ: ಸ್ವಾತಂತ್ರ್ಯ ಸಂಗ್ರಾಮ ಮತ್ತು ಭಾರತದ ಅಭಿವೃದ್ಧಿ ಬಗ್ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಆ.15ರೊಳಗೆ quiz.mygov.in ವೆಬ್‌ಸೈಟ್‌ನಿಂದ ಪಡೆಯ ಬಹುದು. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ಹಾಗೆಯೇ ಶಾಲೆಯಲ್ಲೇ ಇದೇ ಪ್ರಶ್ನೆಯಾಧಾರಿತವಾಗಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ಅಧಿಕ ಅಂಕ ಪಡೆದ ಮಕ್ಕಳನ್ನು ಗೌರವಿಸಲಾಗುತ್ತದೆ. ಹಾಗೆಯೇ 6ರಿಂದ 10ನೇ ತರಗತಿ ಮಕ್ಕಳಿಗೆ ಸ್ವಾತಂತ್ರ್ಯ ಚಳವಳಿ ಬಗ್ಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಗುತ್ತದೆ.

ಅಂತರ್ಜಾಲದ ಮೂಲಕ ಪ್ರಚಾರ: ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮವನ್ನು ರಾಷ್ಟ್ರೀಯ ಚಳವಳಿಯ ರೀತಿಯಲ್ಲಿ ರೂಪಿಸಲಾಗಿದ್ದು, ಸಾಮಾಜಿಕ ಜಾಲತಾಣ ಹಾಗೂ ಸಮೂಹ ಮಾಧ್ಯಮದಲ್ಲಿ, ಶಾಲಾ ವೆಬ್‌ಸೈಟ್‌, ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ವ್ಯಾಪಕ ಪ್ರಚಾರ ಮಾಡಿ, ಸಾರ್ವಜನಿರಕನ್ನು ಪ್ರೇರಿಪಿಸಬೇಕು. ಹಾಗೆಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಶಗುನ್‌ ಪ್ಲಾಟ್‌ಫಾರ್ಮ್, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಫೇಸ್‌ಬುಕ್‌ ಪೇಜ್‌ www.facebook.com /freedom70yearsmhrd/ ಗೆ ಅಪ್‌ ಲೋಡ್‌ ಮಾಡಲು ಎಲ್ಲಾ ಶಿಕ್ಷಣ ಸಂಸ್ಥೆಗೆ ನಿರ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next