ಇತ್ತೀಚಿನ ದಿನದಲ್ಲಿ ನಮ್ಮ ದಿನಚರಿ ತ್ಯಾಜ್ಯ ತೊಟ್ಟಿಯನ್ನು ಕಸ ಸಂಗ್ರಹ ಮಾಡುವ ಸಿಬಂದಿಗೆ ನೀಡುವ ಮೂಲಕ ಆರಂಭ ಆಗುತ್ತದೆ ಎಂದರೂ ತಪ್ಪಲ್ಲ. ನಿತ್ಯ ಬಳಕೆಯ ವಸ್ತುಗಳಿಂದ ಆರಂಭವಾಗುವ ಈ ಸ್ವಚ್ಛತೆಯ ಸಮಸ್ಯೆಗೆ ಪರಿಹಾರ ಕಾಣಲು ಅದೆಷ್ಟು ಹೊಸ ಹೊಸ ಯೋಜನೆಗಳು ರೂಪುಗೊಂಡರು ಕೂಡ ಮನೆ ಮನೆಯಲ್ಲಿ ಈ ಬಗ್ಗೆ ಅರಿವಾಗಬೇಕು. ನಮ್ಮ ಮನೆಗಳು ಅದರ ಸುತ್ತಲಿನ ಪರಿಸರ ಸ್ವಚ್ಚವಾಗುತ್ತಾ ಹೋದರೆ ಇಡೀ ದೇಶವೇ ಸ್ವಚ್ಛ ಭಾರತದ ಕಡೆ ಮುಖಮಾಡಿದಂತಾಗುವುದು.
ಸ್ವಚ್ಛ ಪರಿಸರದಿಂದ ನಮ್ಮ ಆರೋಗ್ಯವು ಕೂಡ ಉತ್ತಮವಾಗಿ ಇರುವ ಹಾಗೇ ಮಾನಸಿಕ ಸ್ಥೈರ್ಯ ಇರುವುದು. ಇಂತಹ ಸ್ವಚ್ಛತೆಯ ಪಾಠವನ್ನು ಎಳೆಯ ಮಕ್ಕಳಿಗೆ ಅವರ ಪೋಷಕರು, ಹೆತ್ತವರು ತಿಳಿ ಹೇಳಬೇಕು. ಮಕ್ಕಳಿಗೆ ಪಾಠ ಬೋಧನೆ ಮಾತ್ರ ಮಾಡದೆ ಅದರ ಜತೆಗೆ ಪ್ರಾಯೋಗಿಕವಾಗಿ ಗಿಡ ನೆಡುವುದು,
ಪ್ಲಾಸ್ಟಿಕ್ ಬಳಕೆ ಇತಿ ಮಿತಿಯ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡಬೇಕು. ಯುವ ಜನತೆಯ ಪಾಲ್ಗೊಳ್ಳುವಿಕೆ ಪರಿಸರ ದಿನಾಚರಣೆ ಬಂತೆಂದಾಗ ಸ್ವಚ್ಛತೆಯ ನೆನಪಾಗುವ ಬದಲು ನಿತ್ಯ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ. ಪ್ಲಾಸ್ಟಿಕ್ ತ್ಯಾಜ್ಯದಲ್ಲಿಯೂ ಮೈಕ್ರೋ ಪ್ಲಾಸ್ಟಿಕ್ ಗಳು ಪರಿಸರಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿರುವುದು ಅನೇಕರಿಗೆ ತಿಳಿದಿಲ್ಲ. ಅನೇಕ ಕಡೆ ಇಂತಹ ಮೈಕ್ರೋ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ಕೂಡ ಸಮಸ್ಯೆ ತಂದೊಡ್ಡುತ್ತಿದೆ. ಹಾಗಾಗಿ ಇಂತಹ ವಿಚಾರಗಳ ಬಗ್ಗೆ ಜಾಗೃತವಾಗಬೇಕಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಹಾನಿಯಾ ಗುವ ಬಗ್ಗೆ ಯುವಜನತೆ ಎಚ್ಚೆತ್ತು ಕೊಂಡು ಪರಿಸರಕ್ಕೆ ಸಂದೇಶ ನೀಡಬೇಕು.
ಬೀಜದ ಉಂಡೆ: ಮನೆಯ ಸುತ್ತ ಮುತ್ತಲಿನ ಕಸಗಳನ್ನು ಕರಕುಶಲ ವಸ್ತುಗಳಾಗಿ ಪರಿವರ್ತಿಸಿ ದರೆ ಅಂತಹ ವಸ್ತುಗಳು ನೋಡಲು ಸುಂದರ ವಾಗುವ ಜತೆಗೆ ನಮ್ಮ ಆರೋಗ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿ ಮಾಡುವುದು. ನಾವು ಎಲ್ಲಿಗಾದರು ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಸೀಡಿಂಗ್ ಬಾಲ್ ಎಸೆದರೆ ಅದು ಕೂಡ ಪ್ರಕೃತಿಯ ಮರುಸೃಷ್ಟಿಗೆ ಸಹಕಾರಿ ಆಗಲಿದೆ. ಮಣ್ಣು ಹಾಗೂ ಗೊಬ್ಬರದ ನಡುವೆ ಗಿಡಗಳ ಬೀಜ ಮಿಶ್ರ ಮಾಡಿ ಎಸೆಯುವ ಪರಿಕಲ್ಪನೆ ನಿಜಕ್ಕೂ ಅದ್ಭುತವಾಗಿದ್ದು ಇಂತಹವುಗಳಿಗೂ ಕೂಡ ನಾವು ಬೆಂಬಲಿಗರಾಗೋಣ.
ಒಟ್ಟಾರೆಯಾಗಿ ಪ್ರಕೃತಿ ನಮಗೆ ಸಿಕ್ಕ ಒಂದು ವರವಾಗಿದ್ದು ಅದನ್ನು ಮುಂದಿನ ತಲೆಮಾರುಗಳಿಗೂ ಉಳಿಸಿಕೊಡಲು ನಾವೆಲ್ಲರೂ ಕೈಜೋಡಿಸಬೇಕು. ಬರಿಯ ಪಾಠ ಪ್ರವಚನದಲ್ಲಿ ಸ್ವಚ್ಚತೆಯ ಪಾಠ ಪಾಲಿಸುವ ಬದಲು ನಮ್ಮ ಜೀವನಕ್ಕೆ ಅವುಗಳನ್ನು ಅಳವಡಿಸಿಕೊಂಡು ನಿತ್ಯ ಮನೆಯ ವಾತಾವರಣದಲ್ಲಿ ಸ್ವಚ್ಚತೆಯ ಪರಿಪಾಠ ರೂಢಿಯಾದರೆ ಮನೆ ಮನೆಯಿಂದ ದೇಶವೇ ಸ್ವಚ್ಚವಾಗುವ ಜತೆಗೆ ಪ್ರಾಕೃತಿಕ ಸಂಪತ್ತು ಕೂಡ ಇನ್ನಷ್ಟು ಸಮೃದ್ಧವಾಗಲಿದೆ.
-ಪ್ರೀತಿ
ರುಕ್ಮಿಣಿ ಶೆಡ್ತಿ, ಸ.ಪ್ರ.ದ.
ಕಾಲೇಜು, ಬಾರಕೂರು