ವಿಜಯಪುರ : ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗಾಗಿ ಶುಕ್ರವಾರ ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಜ್ಞಾನಯೋಗಾಶ್ರಮಕ್ಕೆ ಭೇಟಿ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ಮಾಡಿದ ಸ್ಥಳ ದರ್ಶನ ಪಡೆದು, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಲ್ಲದೇ ಮುಕ್ತಾಯದ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಿದ್ಧೇಶ್ವರ ಶ್ರೀಗಳ ಹೆಸರು ಇಡುವು ಸೂಕ್ತ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಮಲ್ಲಿಕಾರ್ಜುನ ಶ್ರೀಗಳ ಕತೃಗದ್ದುಗೆಗೆ ಪೂಜೆ ಸಲ್ಲಿಸಿದರು. ಜ್ಞಾನಯೋಗಾಶ್ರಮದಲ್ಲಿ ಉಪಸ್ಥಿತರಿದ್ದ ಅದ್ವೈತಾನಂದ ಶ್ರೀಗಳು,ಪರಮಾನಂದ ಶ್ರೀಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಕಾರಣಾಂತರಗಳಿಂದ ಶ್ರೀಗಳ ಅಂತ್ಯಕ್ರಿಯೆಯಲ್ಲಿ ನಾನು ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದರು.
ಸಿದ್ಧೇಶ್ವರ ಶ್ರೀಗಳಂಥ ನಿರ್ಮೋಹಿ ಸಂತ ಮತ್ತೆ ಈ ನೆಲದಲ್ಲಿ ಹುಟ್ಟುವುದು ಅಸಾಧ್ಯ. ಶ್ರೀಗಳ ಪ್ರವಚನ, ಸಂದೇಶಗಳನ್ನು ಸ್ಮರಿಸಿದ ಅವರು, ಆಶ್ರಮಕ್ಕೆ ಭೇಟಿ ನೀಡಿದ್ದು, ಅವರ ನಡೆದಾಡಿದ ನೆಲದಲ್ಲಿ ನಿಂತಿರುವುದು ನನ್ನ ಬದುಕಿನ ಪಾವನ ಕ್ಷಣ ಎನಿಸಲಿದೆ. ಶ್ರೀಗಳು ತೋರಿದ ಮಾರ್ಗದಲ್ಲಿ ನಾವು ನಡೆಯುವ ಅಗತ್ಯವಿದೆ ಎಂದರು.
ಸಿದ್ದೇಶ್ವರ ಶ್ರೀಗಳ ನುಡಿದಂತೆ ನಡೆದ ಸರಳತೆಯ ಬದುಕು ಎಲ್ಲರಿಗೂ ಮಾದರಿ. ಅವರು ಕಠಿಣ ಬದುಕು ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದ ಅವರಂಥ ಮಹಾನ್ ಸಂತರ ಮಾದರಿ ಬದುಕು ಎಂದು ಬಣ್ಣಿಸಿದರು.
ಪ್ರಸ್ತುತ ಶೈಕ್ಷಣಿಕ ಪಠ್ಯದಲ್ಲಿ ಯಾವ ಯಾವುದೋ ವ್ಯಕ್ತಿಗಳ ಪಠ್ಯದ ಓದು, ಚರ್ಚೆ ಮಾಡಲಾಗುತ್ತದೆ. ಸಿದ್ದೇಶ್ವರ ಶ್ರೀಗಳ ಕುರಿತ ವಿಚಾರ ಪಠ್ಯದಲ್ಲಿ ಬಂದಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳ ಹೆಚ್ಚಲಿವೆ ಎಂದರು.
ಜೆಡಿಎಸ್ ನಾಗಠಾಣ ಶಾಸಕ ದೇವಾನಂದ ಚೌವ್ಹಾಣ, ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಸೇರಿದಂತೆ ಇತರರು ಜೊತೆಗಿದ್ದರು.