Advertisement

500 ರೂ. ಕೊಟ್ಟು ಜನ ಸೇರಿಸಿ ಎಂಬ ಸಿದ್ದು ವೀಡಿಯೋ ವೈರಲ್‌: ತೀವ್ರ ಟೀಕೆ

08:38 AM Mar 03, 2023 | Team Udayavani |

ಬೆಂಗಳೂರು: ಜನರಿಗೆ 500 ರೂಪಾಯಿ ಕೊಟ್ಟು ಪ್ರಜಾಧ್ವನಿ ಯಾತ್ರೆ ಸಮಾವೇಶಗಳಿಗೆ ಕರೆತನ್ನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ವೀಡಿಯೋ ತುಣುಕು ವೈರಲ್‌ ಆಗಿದೆ. ಇದನ್ನೇ ಮುಂದಿಟ್ಟು ಕಾಂಗ್ರೆಸ್‌ ಮೇಲೆ ಬಿಜೆಪಿ ಮತ್ತು ಜೆಡಿಎಸ್‌ ಮುಗಿಬಿದ್ದಿದೆ.

Advertisement

ಕಾಂಗ್ರೆಸ್‌ ಮೊದಲಿನಿಂದಲೂ 500 ರೂ. ಕೊಟ್ಟು ಜನರನ್ನು ಸೇರಿಸುತ್ತಿದ್ದು, ಈಗ ಅದು ಬಹಿರಂಗವಾಗಿದೆ. ಅದರಲ್ಲಿ ಆಶ್ಚರ್ಯವಿಲ್ಲ. ಇದು ಅವರ ಪರಂಪರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದುಡ್ಡು ಕೊಟ್ಟು ಜನರನ್ನು ಕರೆತರುವುದು, ಅವರಿಗೆಲ್ಲ ಬಿಟ್ಟಿ ಭಾಗ್ಯ ಘೋಷಿಸುವುದು ಕಾಂಗ್ರೆಸ್‌ ಸ್ಥಿತಿ. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್‌ ಕಥೆ ಈಗ ಮುಂಡಾಸು ಇಲ್ಲದ ಮದುಮಗನಂತೆ ಆಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಕಾಂಗ್ರೆಸ್‌ ನಾಯಕರು ನಗರ ಪ್ರದೇಶಗಳಲ್ಲಿ ಪ್ರಜಾಧ್ವನಿ ಮಾಡುವುದಲ್ಲ. ತಾಲೂಕುಗಳಲ್ಲಿ 500 ರೂ. ಕೊಟ್ಟು ಜನರನ್ನು ತರುವುದಲ್ಲ. ಬದಲಾಗಿ ಹಳ್ಳಿಗಳಿಗೆ ಹೋಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹಲವಾರು ಭಾಗ್ಯಗಳನ್ನು ಕೊಟ್ಟು ಸಮಾಜ ಉದ್ಧಾರ ಮಾಡಿದ್ದೇವೆ ಎನ್ನುತ್ತಾರೆ. ಸಮಾವೇಶಗಳಿಗೆ ಸೇರಿಸಲು 500 ರೂಪಾಯಿ ಕೊಟ್ಟು ಜನರನ್ನು ಕರೆತರಬೇಕಾ ಎಂದು ಪ್ರಶ್ನಿಸಿದ್ದಾರೆ.
65 ವರ್ಷಗಳ ಕಾಲ ಕಾಂಗ್ರೆಸ್‌ ಹೇಗೆ ಆಡಳಿತ ನಡೆಸಿತ್ತು ಎಂಬುದಕ್ಕೆ ಸಿದ್ದರಾಮಯ್ಯ ಅವರ ಹೇಳಿಕೆ ಸಾಕ್ಷಿ. ಚುನಾವಣ ಸಂದರ್ಭದಲ್ಲಿ ಸಿದ್ದರಾಮಯ್ಯ ಮತದಾರರಿಗೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಲೂಟಿ ಹೊಡೆಯುವುದಕ್ಕೆ ಎಟಿಎಂ ಕಾರ್ಡ್‌ನಂತೆ ಬಳಸಿಕೊಳ್ಳುತ್ತಾರೆ ಎಂದು ಅಮಿತ್‌ ಶಾ ಮಾಡಿದ್ದ ಆರೋಪಕ್ಕೆ ಸಿದ್ದರಾಮಯ್ಯ ಅವರ ಹೇಳಿಕೆ ಸಾಕ್ಷಿ ಎಂದು ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಈ ಎಲ್ಲ ಆರೋಪಗಳನ್ನು ತಿರಸ್ಕರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಮಾವೇಶಗಳಿಗೆ ಹಣ ಕೊಟ್ಟು ಕರೆದುಕೊಂಡು ಬರುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next