ಬೆಂಗಳೂರು: ಜೆಡಿಎಸ್‌ನ ಜಾತ್ಯತೀತತೆ ಕೇವಲ ಹೆಸರಿನಲ್ಲಷ್ಟೇ ಉಳಿದಿದೆ ಎಂದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅವರದ್ದು ಅವಕಾಶವಾದಿ ರಾಜಕಾರಣ ಎಂದು ಆರೋಪಿಸಿದ್ದಾರೆ.
ಹೆಬ್ಟಾಳ ವಿಧಾನಸಭಾ ಕ್ಷೇತ್ರದಲ್ಲಿ ದಿನಸಿ ಕಿಟ್‌ಗಳ ವಿತರಣೆ ಹಾಗೂ ಜೆಡಿಎಸ್ ಮುಖಂಡ ಹನುಮಂತೇಗೌಡ ಅವರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಮಾತೆತ್ತಿದ್ದರೆ ನಮ್ಮದು ಜಾತ್ಯತೀತ ಪಕ್ಷ ಅನ್ನುತ್ತೆ.
ಜಾತ್ಯತೀತತೆ ಬರೀ ಹೆಸರಿನಲ್ಲಷ್ಟೇ ಉಳಿದಿದೆ, ಸಿದ್ಧಾಂತವಾಗಿ ಅಲ್ಲ. ಇದೇ ಕಾರಣಕ್ಕೆ ಹನುಮಂತೇಗೌಡ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನದ್ದು ಅವಕಾಶವಾದಿ ರಾಜಕಾರಣ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಕಾರಣಕ್ಕೆ ನಾವು 80 ಶಾಸಕರಿದ್ದರೂ ಅವರಿಗೆ ಬೆಂಬಲ ಕೊಟ್ಟು, ಅವರನ್ನೇ ಮುಖ್ಯಮಂತ್ರಿ ಮಾಡಲು ಒಪ್ಪಿದೆವು ಎಂದರು.
ಜೆಡಿಎಸ್ ಬಹುಮತ ಪಡೆದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ, ಅವರಿಗೆ ಯಾರಾದರೂ ನಡೆಯುತ್ತದೆ. ನಂಜನಗೂಡಿನಲ್ಲಿ ದೇವಸ್ಥಾನ ಒಡೆದವರು ಬಿಜೆಪಿಯವರೇ, ಅದರ ವಿರುದ್ಧ ಪ್ರತಿಭಟನೆ ಮಾಡೋರು ಬಿಜೆಪಿಯವರೇ. ತಮ್ಮೆಲ್ಲರಲ್ಲಿ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತು ಬಿಸಾಕಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಇದನ್ನೂ ಓದಿ :ಯೋಗಿ ಸಂಪುಟ ವಿಸ್ತರಣೆ: ಕೈ ತೊರೆದಿದ್ದ ಜಿತಿನ್ ಪ್ರಸಾದ್ ಗೆ ಕ್ಯಾಬಿನೆಟ್ ದರ್ಜೆ