Advertisement

ಕಾಂಗ್ರೆಸ್ ಜೆಡಿಎಸ್‌ ಗೆ ಅಧಿಕಾರ ಕೊಟ್ಟರೂ ಉಳಿಸಿಕೊಳ್ಳಲಿಲ್ಲ : ಸಿದ್ದರಾಮಯ್ಯ ಲೇವಡಿ

09:21 PM Jul 01, 2021 | Team Udayavani |

ಮಂಡ್ಯ: 2018 ರ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದ ಪರಿಣಾಮ ೮೦ ಸೀಟು ಪಡೆದಿದ್ದ ನಾವು 37 ಸೀಟು ಗೆದ್ದಿದ್ದ ಜೆಡಿಎಸ್‌ಗೆ ಅಧಿಕಾರ ತ್ಯಾಗ ಮಾಡಿದೆವು. ಆದರೆ ಆ ಅಧಿಕಾರವನ್ನು ಉಳಿಸಿಕೊಳ್ಳಲು ಜೆಡಿಎಸ್ ಪಕ್ಷಕ್ಕೆ ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement

ನಗರದ ಶಂಕರಮಠದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಫುಡ್‌ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ನಾವು ಆ ಚುನಾವಣೆಯಲ್ಲಿ 80 ಸೀಟು ಗೆದ್ದರೂ ಅಧಿಕಾರದ ಆಸೆಯನ್ನು ಬಿಟ್ಟು ಜೆಡಿಎಸ್‌ಗೆ ಸಿಎಂ ಖುರ್ಚಿ ತ್ಯಾಗ ಮಾಡಿದೆವು. ಆದರೆ ಅದನ್ನು ಉಳಿಸಿಕೊಳ್ಳಲಾಗದೇ ಅವರು ರಾಜೀನಾಮೆ ನೀಡಿದರು. ಇದಕ್ಕೆ ಅವರೇ ಹೊಣೆ ಎಂದರು.

ಇದನ್ನೂ ಓದಿ : ಮುಖ್ಯಮಂತ್ರಿಗಳಿಗೆ 40 ಐ.ಸಿ.ಯು ಹಾಸಿಗೆಗಳು ಹಾಗೂ  ವೈದ್ಯಕೀಯ ಉಪಕರಣಗಳ ಹಸ್ತಾಂತರ 

ಜೆಡಿಎಸ್ ಪಕ್ಷ ಕೇವಲ 25 ರಿಂದ 30 ಸೀಟು ಗೆದ್ದು ಬಿಜೆಪಿ ಅಥವಾ ಕಾಂಗ್ರೆಸ್ ಹೆಚ್ಚಿನ ಸೀಟು ಗೆದ್ದರೆ ಸರ್ಕಾರ ರಚನೆ ಮಾಡಲು ನಮ್ಮ ಸಹಾಯ ಕೇಳುತ್ತಾರೆ ಎಂದು ಕಾದು ಕುಳಿತುಕೊಳ್ಳುವ ಪಕ್ಷ. ಅವರಿಗೆ ಯಾರು ಆಶ್ರಯ ಕೊಡುತ್ತಾರೆ. ಆ ಪಕ್ಷಕ್ಕೆ ಜಿಗಿಯುವ ಅವರಿಗೆ ಮಂಡ್ಯ ಜನ ಹೆಚ್ಚಿನ ಮಹತ್ವ ಕೊಡಬಾರದು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಜನತೆಗೆ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ ಈಗಿನ ಸಿಎಂ ಯಡಿಯೂರಪ್ಪ ಅದನ್ನು ಕಿತ್ತುಕೊಂಡಿದ್ದಾರೆ. ಕೋವಿಡ್‌ನಂಥ ಸಂದರ್ಭದಲ್ಲೂ ಜನರಿಗೆ ಅಕ್ಕಿ ನೀಡದೇ ನಿಲ್ಲಿಸಿರುವುದು ಯಾವ ನ್ಯಾಯ. ನಮ್ಮ ಸರ್ಕಾರ ಮತ್ತೆ ಬಂದರೆ ಮತ್ತೆ 7 ಕೆಜಿ ಅಕ್ಕಿ ನೀಡಲಾಗುವುದು ಎಂದರು.

Advertisement

ಜನಸೇವೆ ಮಾಡಲು ಆಗದ ಯಡಿಯೂರಪ್ಪ ವಾಮಮಾರ್ಗದಿಂದ ಶಾಸಕರನ್ನು ಕೊಂಡುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಅತ್ತ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಹಣಕಾಸು ವ್ಯವಸ್ಥೆ ಹಾಳಾಗಿ ಹೋಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಮೋದಿ ಆರ್ಥಿಕ ನೀತಿಯಿಂದ ಜನ ಕಂಗೆಡುವಂತಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಬಡವರ ಪರ ಇರುವ ಪಕ್ಷಗಳಲ್ಲ. ಕಾಂಗ್ರೆಸ್ ಮಾತ್ರವೇ ಬಡವರು, ಶೋಷಿತರ ಜೊತೆ ಇರುವ ಪಕ್ಷ. ಜಾತಿ ನೋಡದೇ ಎಲ್ಲರಿಗೂ ಸಮಾನ ಸೌಲಭ್ಯ ಕಲ್ಪಿಸಿಕೊಡುವ ದೇಶದ ಏಕೈಕ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು ನಮ್ಮ ದುರಾದೃಷ್ಟ. ಕಳೆದ ಬಾರಿ ಜನ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಲಿಲ್ಲ. ಬಡವರು, ಶ್ರಮಿಕರು, ಕಾರ್ಮಿಕರ ಪರವಾಗಿ ಸರ್ಕಾರ ಬರಬೇಕೆಂದರೆ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದರು.

ಮಾಜಿ ಸಚಿವರಾದ ಎಂ.ಎಸ್.ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆಪಿಸಿಸಿ ಸದಸ್ಯ ಎಂ.ಡಿ.ಜಯರಾಂ, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರ್‌ನಾಥ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಗಣಿಗ ರವಿಕುಮಾರ್, ನಗರಸಭೆ ಸದಸ್ಯ ನಯೀಂ, ಸಿದ್ದರಾಮೇಗೌಡ, ಮುನಾವರ್ ಖಾನ್, ವಿಜಯ್‌ಕುಮಾರ್, ಅಂಜನಾ ಶ್ರೀಕಾಂತ್ ಉಪಸ್ಥಿತರಿದ್ದರು.

ಇದನ್ನೂ ಓದಿ : ಇಂದಿನಿಂದ ಖಾಸಗಿ ಬಸ್ ಸಂಚಾರ ಆರಂಭ – ಡ್ರೈವರ್ , ಕಂಡಕ್ಟರ್, ಮಾಲಕರ ಪ್ರತಿಕ್ರಿಯೆ ಕೇಳಿ

Advertisement

Udayavani is now on Telegram. Click here to join our channel and stay updated with the latest news.

Next