Advertisement

ಕೋವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

01:45 PM Jul 23, 2020 | keerthan |

ಬೆಂಗಳೂರು: ಕೋವಿಡ್-19 ಚಿಕಿತ್ಸಾ ಉಪಕರಣಗಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಚಿವರು ಮತ್ತು ಅಧಿಕಾರಿಗಳು 2000 ಕೋಟಿ ರೂ ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ವಿಷಯದಲ್ಲಿ ಸರ್ಕಾರ ಮಾಡುತ್ತಿರುವ ಜನದ್ರೋಹವನ್ನು ಜನರಿಗೆ ತಿಳಿಸದೇ ಹೋದರೆ ನಾವು ಜನ ದ್ರೋಹಿಗಳಾಗುತ್ತೇವೆ ಎಂದರು.

ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಶ್ರೀರಾಮುಲು 323 ಕೋಟಿ ರೂ. ಮಾತ್ರ ನಾವು ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಇನ್ನೊಬ್ಬ ಮಂತ್ರಿ 33 ಕೋಟಿ ರೂ. ಮಾತ್ರ ಅಂತ ಹೇಳುತ್ತಾರೆ. ನನ್ನ ಪ್ರಕಾರ ಆರೋಗ್ಯ ಇಲಾಖೆ 700 ಕೋಟಿ ರೂ, ಬಿಬಿಎಂಪಿ 200 ಕೋಟಿ ರೂ., ಜಿಲ್ಲಾಡಳಿತ 700 ಕೋಟಿ ರೂ., ಕಾರ್ಮಿಕ ಇಲಾಖೆ 1000 ಕೋಟಿ ರೂ., ವೈದ್ಯಕೀಯ ಇಲಾಖೆ, 815 ಕೋಟಿ ರೂ., ಹಿಂದುಳಿದ ವಿಭಾಗ ಮತ್ತು ಅಲ್ಪ ಸಂಖ್ಯಾತ ಇಲಾಖೆ 1000 ಕೋಟಿ ರೂ. ಖರ್ಚು ಮಾಡಿದ್ದೇವೆ ಅಂತ ಅವರೆ ಹೇಳಿದ್ದಾರೆ.

ಆಹಾರ ಇಲಾಖೆ, ಮಹಿಳಾ ಮಕ್ಕಳ ಇಲಾಖೆ 500 ಕೋಟಿ ರೂ., ಕೊವಿಡ್ ಆರೈಕೆ ಕೇಂದ್ರಕ್ಕೆ 160 ಕೋಟಿ ರೂ., ಕೇಂದ್ರ ಖರಿದಿಸಿದ್ದು 200 ಕೋಟಿ, ಒಟ್ಟು 4160 ಕೋಟಿ ರೂ. ಖರ್ಚು ಮಾಡಿದ್ದಾರೆ. ಇವುಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಳ ಮಾಡಿ ಖರಿದಿಸಿದ್ದಾರೆ. ಇದರಲ್ಲಿ 2000 ಕೋಟಿ ರೂ. ಅಧಿಕಾರಿಗಳು ಹಾಗೂ ಸಚಿವರು ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದರಲ್ಲಿ ಸುಳ್ಳು ಹೇಳಿರುವುದು ಸರಕಾರ ನಡೆಸುತ್ತಿರುವ ನೀವುಗಳು. ನೀವು ಸರಿಯಾದ ಮಾಹಿತಿ ನೀಡಬೇಕು. ಸರ್ಕಾರ ಖರ್ಚು ಮಾಡುವ ಒಂದೊಂದು ರೂ. ಲೆಕ್ಕ ಕೊಡಬೇಕು. ಲೆಕ್ಕ ಕೇಳುವ ಕೆಲಸ ನಾವು ಮಾಡುತ್ತೇವೆ ಎಂದು ಸರ್ಕಾರಕ್ಕೆ ತಿವಿದರು.

Advertisement

ದೇಶದಲ್ಲಿ ಲಾಕ್ ಡೌನ್ ಮಾಡಿದಾಗ ಕೋವಿಡ್ ಸಂಖ್ಯೆ ಕಡಿಮೆ ಇತ್ತು  ಈಗ ರಾಜ್ಯದಲ್ಲಿ 50 ಸಾವಿರ ಪ್ರಕರಣ ದಾಖಲಾಗಿವೆ. 1500 ಸಾವಾಗಿದೆ. ಇಷ್ಟೆಲ್ಲ ಖರೀದಿ ಮಾಡಿ, ಏನು ಸಾಧನೆ ಮಾಡಿದಿರಿ. ಇದಕ್ಕೆ ನಾವು ನಿಮಗೆ ಸಹಕಾರ ಕೊಡಬೇಕಾ, ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದರು.

ಪ್ರಧಾನಿ 21 ದಿನ ಸಹಿಸಿಕೊಳ್ಳಿ ಎಲ್ಲ ಸರಿಹೋಗುತ್ತದೆ ಎಂದು ಹೇಳಿದ್ದೀರಿ,120 ದಿನ ಆಗಿದೆ. ಈಗ 12 ಲಕ್ಷ ಪ್ರಕರಣಗಳಾಗಿವೆ ಇದು ನಿಮ್ಮ ಸಾಧನೆಯೇ ವೈಫಲ್ಯವೇ, ಪ್ರಧಾನಿಯವರು ಉತ್ತರಿಸಲಿ ಆಗ್ರಹಿಸಿದರು.

ರಾಜ್ಯದ ಇತಿಹಾಸದಲ್ಲಿ ಇಂತಹ ಭ್ರಷ್ಟ ಸರ್ಕಾರ ಬಂದಿರಲಿಲ್ಲ. ವಲಸೆ ಕಾರ್ಮಿಕರು ರಾಜ್ಯದಲ್ಲಿ ನರಕ ಯಾತನೆ ಅನುಭವಿಸಿದ್ದಾರೆ. ಕಾರ್ಮಿಕರಿಗೆ ಮೂಸಂಬಿ ಹಣ್ಣು ಕೊಟ್ಟಿರುವುದಾಗಿ ಹೇಳಿದ್ದಾರೆ. ಈಗ ಮೂಸಂಬಿ ಸೀಸನ್ ಅಲ್ಲಾ ಎಲ್ಲಿಂದ ಮೂಸಂಬಿ ತಂದಿದ್ದರು ಎಲ್ಲವೂ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಆರೋಗ್ಯ ಇಲಾಖೆಗೆ ಈ ವರ್ಷ 1437 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, 3322 ಕೋಟಿ ಖರ್ಚು ಮಾಡಿದ್ದಾರೆ. ರಾಮುಲು ಅವರು ತಮ್ಮ ಇಲಾಖೆಯಲ್ಲಿ ಎಷ್ಟು ಹಣ ಇದೆ, ಎಷ್ಟು ಖರ್ಚಾಗಿದೆ ಎಂದಾದರೂ ತಿಳಿದುಕೊಳ್ಳಬೇಕಲ್ಲ ಎಂದರು.

ಕೇಂದ್ರ ಸರ್ಕಾರ 50 ಸಾವಿರ ವೆಂಟಿಲೇಟರ್ ಖರೀದಿ ಮಾಡಿದೆ. ಪ್ರತಿ ವೆಂಟಿಲೇಟರ್ ಬೆಲೆ 4 ಲಕ್ಷ ಕೊಟ್ಟು ಖರಿದಿಸಿದೆ. ತಮಿಳುನಾಡು 100 ವೆಂಟಿಲೇಟರ್ ಖರಿದಿಸಿದ್ದಾರೆ. 4.78 ಲಕ್ಷ ಒಂದಕ್ಕೆ ಖರಿದಿಸಿದ್ದಾರೆ.  ರಾಜ್ಯ ಸರ್ಕಾರ ಒಂದು ವೆಂಟಿಲೇಟರ್ 5.60 ಲಕ್ಷ. ಎರಡನೇ ಬಾರಿ 12 ಲಕ್ಷ ಕ್ಕೆ ಖದಿರಿಸಿದ್ದಾರೆ. ಅದೇ ತಿಂಗಳು 18.20 ಲಕ್ಷಕ್ಕೆ ಖರಿರೀದಿ ಮಾಡಿದ್ದಾರೆ. ಈ ಮಾಹಿತಿಯನ್ನು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ನೀಡಿದ್ದಾರೆ. ಇದನ್ನು ಭ್ರಷ್ಟಾಚಾರದ ವಾಸನೆ ಬರುತ್ತಿದೆ ಅನ್ನೋದನ್ನು ಸುವಾಸನೆ ಬರುತ್ತಿದೆ ಎಂದು ಕರಿಯಬೇಕಾ ಎಂದು ಟೀಕಿಸಿದರು.

ಪಿಪಿಇ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಹೇಳಿದ ಅವರು, ರಾಜ್ಯ ಸರ್ಕಾರ 9.65 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿ ಪಿಪಿಇ ಕಿಟ್ ಗೆ 330 ರೂ ಬೆಲೆಯಿದೆ. ಮಹಾರಾಷ್ಟ್ರದ ಫ್ಲಾಸ್ಕ್ ಸರ್ಜಿ ಅನ್ನುವ ಕಂಪನಿಯಿಂದ 3.5 ಲಕ್ಷ ಖರೀದಿಸಿದ್ದಾರೆ. ಇವು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ವೈದ್ಯರು ಪ್ರತಿಭಟನೆ ನಡೆಸಿದರು. ಅದರಲ್ಲಿ 1.25 ಲಕ್ಷ ವಾಪಸ್ ಕಳುಹಿಸಿದ್ದಾರೆ. ಪ್ರತಿ ಕಿಟ್ ಗೆ ರಾಜ್ಯ ಸರ್ಕಾರ 2117 ರೂ. ಕೊಟ್ಟು ಖರೀದಿಸಿದ್ದಾರೆ ಎಂದರು.

3 ಲಕ್ಷ ಕಿಟ್ ಗಳನ್ನು ಚೀನಾದಿಂದ 94 ಕೋಟಿ 27 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಇವರು ಸ್ವದೇಶಿ ಭಾಷಣ ಮಾಡುತ್ತಾರೆ. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ.  ಗಡಿಯಲ್ಲಿ ಚೀನಾದವರಿದಂದ ನಮ್ಮ ಸೈನಿಕರು ಸತ್ತರು. ಇವರು ಅದೇ ಚೀನಾದಿಂದ ಖರಿದಿಸಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಎನ್ ಎಸ್. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಬಳ್ಳಾರಿ ಸರ್ಕಾರಿ ಕಾಲೇಜು ಪ್ರಿನ್ಸಿಪಾಲರು 1200 ರೂ. ಕೊಟ್ಟು ಪಿಪಿಇ ಕಿಟ್ ಖರೀದಿಸಿದ್ದಾರೆ. ಸುಮಾರು 10 ಲಕ್ಷ ಕೊಟ್ಟು ಮಾಸ್ಕ್ ಖರೀದಿಸಿದ್ದಾರೆ.  ಎನ್ 95 ಮಾಸ್ಕ್ 50 ರೂ ಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವರು 120 ರಿಂದ 150 ರೂ ಗೆ ಖರೀದಿಸಿದ್ದಾರೆ. ಥರ್ಮಲ್ ಸ್ಕ್ಯಾನರ್ 5945 ರೂ ಕೊಟ್ಟು ಖರೀದಿ ಮಾಡಿದ್ದಾರೆ. ಅದು ಮಾರುಕಟ್ಟೆಯಲ್ಲಿ 1500-2000 ರೂಗೆ ದೊರೆಯುತ್ತದೆ.  ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ 80-100 ರೂ ಇದೆ. ಇವರು 250 ರೂ. ಕೊಟ್ಟು ಖರೀದಿಸಿದ್ದಾರೆ. ಅದನ್ನೇ ಸಮಾಜ ಕಲ್ಯಾಣ ಇಲಾಖೆಯವರು 600 ರೂ ಕೊಟ್ಟು ಖರೀದಿಸಿದ್ದಾರೆ ಎಂದು ಆರೋಪಿಸಿದರು.

ಆಕ್ಷಿಬಿಟರ್ 300 ಖರಿದಿಸಿದ್ದಾರೆ. 4.36 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಒಟ್ಟು 13.10 ಕೋಟಿ ಹಣ ಖರ್ಚು ಮಾಡಿದ್ದಾರೆ. ಕೇರಳದವರು 2. 86 ಲಕ್ಷ ಕೊಟ್ಟು ಖರೀದಿ ಮಾಡಿದ್ದಾರೆ. ಬೇರೆ ರಾಜ್ಯದವರಿಗೆ ಕಡಿಮೆ ದರಕ್ಕೆ ಸಿಕ್ಕಿದೆ. ನಮ್ಮವರಿಗೆ ಏಕೆ ಸಿಕ್ಕಿಲ್ಲ. ಎಸ್ ಎಂ ಫಾರ್ಮಾಸಿಟಿಕಲ್ ಕಂಪನಿ ರಾಮನಗರ ಮತ್ತು ಕಲಬುರ್ಗಿಯಲ್ಕಿ ಕಳಪೆ ಸ್ಯಾನಿಟೈಸರ್ ನೀಡಿದ್ದಾರೆ. ಜನರಿಗೆ ಬರ ಬಂದರೆ ಸರ್ಕಾರಕ್ಕೆ ಹಬ್ಬ ಅಂತ ಜನ ಹೇಳುತ್ತಿದ್ದರು. ಈಗ ಕೋವಿಡ್ ಈ ಸರ್ಕಾರಕ್ಕೆ ಹಬ್ಬ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.

ಸಂಸ್ಕೃತಿ, ನಾಗರಿಕತೆ, ಸಂಸ್ಕಾರದ ಬಗ್ಗೆ ಮಾತನಾಡುವ ಇವರು ಅಂತ್ಯ ಸಂಸ್ಕಾರವನ್ನು ಅಮಾನವೀಯವಾಗಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ 4 ಸಾವಿರ ಕೋಟಿಗೂ ಹೆಚ್ಚು ಖರಿದಿ ಮಾಡಿದ್ದಾರೆ. ಇದು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಆದರೆ, ಭ್ರಷ್ಟಾಚಾರಕ್ಕೆ ಸಹಕಾರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next