ಬೆಂಗಳೂರು : ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧವೇ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ದರ 100 ರೂ. ಗಡಿ ದಾಟಿದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂಬ ಜನ ಸಾಮಾನ್ಯರ ಆಕ್ರೊಶದ ಬೆನ್ನಿಗೆ ಈಗ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನು ಕೂಡ ನೀಡಿದೆ.
ಈ ಬಗ್ಗೆ ಟ್ವೀಟರ್ ಖಾತೆಯ ಮೂಲಕ ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿದ್ಯುತ್, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಮನಸೋಯಿಚ್ಛೆ ಹೆಚ್ಚಿಸುವ ಮೂಲಕ ಕೋವಿಡ್ ಸಂಕಷ್ಟದಲ್ಲಿರುವ ಜನರ ತಲೆಯ ಮೇಲೆ ಬಿಜೆಪಿ ಸರ್ಕಾರ ಚಪ್ಪಡಿ ಎಳೆದಿದೆ ಎಂದಿದ್ದಾರೆ.
ಇದನ್ನೂ ಓದಿ : ಕೋವಿಡ್ ಸ್ಥಿತಿಯಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡುವುದು ಸರಿಯಲ್ಲ :ಸಿದ್ದರಾಮಯ್ಯ
ಮಾಜಿ ಪ್ರಧಾನಿ ಮನಮೋಹನ್ ಸೀಂಗ್ ಅವರನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಸಿಂಗ್ ಕಾಲದಲ್ಲಿ ಪೆಟ್ರೋಲ್ ಬೆಲೆ ಕೇವಲ 1 ರೂ ಏರಿಕೆ ಮಾಡಿದಾಗ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ತೀವ್ರ ವಿರೋಧ ಮಾಡಿದ್ದರು. ಈಗ ತಾವೇ ಬೆಲೆಯೇರಿಕೆ ಮಾಡಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ ಎಂದು ಪ್ರಶ್ನೆ ಕೇಳುವುದರ ಮೂಲಕ ಕಿಡಿ ಕಾರಿದ್ದಾರೆ.
ಇನ್ನು, ಸಿಂಗ್ ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ 125 ಡಾಲರ್ ಇತ್ತು. ಆಗ ಪೆಟ್ರೋಲ್, ಡಿಸೇಲ್ ದರವನ್ನು ಈ ಪ್ರಮಾಣದಲ್ಲಿ ಏರಿಕೆ ಮಾಡಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಒಂದು ಹಂತದಲ್ಲಿ ಕಚ್ಛಾತೈಲ ದರ 46-47 ಡಾಲರ್ ಕುಸಿದಿತ್ತು. ಆಗ ಗ್ರಾಹಕರಿಗೆ ಕಡಿಮೆ ಬೆಲೆಗೆ ಕೊಟ್ಟಿದ್ದರೆ ? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ ಅವರು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ಸೂಚನೆ ಮೇರೆಗೆ ರಾಜ್ಯದಲ್ಲಿ 5 ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೋವಿಡ್ ನಿಂದ ಸುಮ್ಮನಿರ್ತಾರೆ, ಲಾಕ್ ಡೌನ್ ಇರುವ ಕಾರಣ ಹೊರಗೆ ಬಂದು ಪ್ರತಿಭಟನೆ ಮಾಡುವುದಿಲ್ಲ ಎಂದು ಜನರ ತಲೆಯ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ : ಗೋವಾ : ಸಿಎಂ ಹಾಗೂ ಎಚ್ ಎಮ್ ನಡುವೆ ಯಾವ ಭಿನ್ನಾಭಿಪ್ರಾಯಗಳಿಲ್ಲ : ರವಿ