ಚಿಂತಾಮಣಿ: ಮರದಿಂದ ಮರಕ್ಕೆ, ಮನೆಗಳ ಮೇಲೆ ಸದಾ ಲವಲವಿಕೆಯಿಂದ ಜಿಗಿದಾಡುತ್ತಿದ್ದ ಕೋತಿ ಗಳು, ಮೂರು ನಾಲ್ಕು ದಿನದಿಂದ ಏಕಾಏಕಿ ನೀರು, ಆಹಾರ ಬಿಟ್ಟು ಎಲ್ಲೆಂದರಲ್ಲೇ ಸುಸ್ತಾಗಿ ಮಲಗುತ್ತಿವೆ. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕ ತಂದಿದ್ದು, ಕೋವಿಡ್ ಪರೀಕ್ಷೆ ಮಾಡುವಂತೆ ಆಗ್ರಹಿಸಿದ್ದಾರೆ.
ತಾಲೂಕಿನ ಕೈವಾರ ಹೋಬಳಿಯ ಜಂಗಮ ಶೀಗೇನಹಳ್ಳಿ ಗ್ರಾಮದಲ್ಲಿ40ಕ್ಕೂ ಹೆಚ್ಚು ಮಂಗಗಳು ಬಲಹೀನವಾಗಿ ಇದ್ದ ಸ್ಥಳಗಳಲ್ಲೇ ಕುಸಿದು ಬೀಳುತ್ತಿವೆ. ಕೋತಿಗಳು ಏಕಾಏಕಿ ಅಸ್ವಸ್ಥಗೊಂಡಿರುವುದನ್ನು ಕಂಡ ಗ್ರಾಮಸ್ಥರು ಮಂಗಗಳಿಗೆಯಾವುದೋ ರೋಗ ಬಂದಿರಬಹುದು ಎಂದು ಹೇಳುತ್ತಿದ್ದಾರೆ.
ಕೋವಿಡ್ ವೈರಸ್‌ನ ಶಂಕೆ: ಇನ್ನು ಗ್ರಾಮದಲ್ಲಿನ ಕೋತಿಗಳು ಕಳೆ ಮೂರು ದಿನಗಳಿಂದ ರಾತ್ರಿ ವೇಳೆ ವಿಪರೀತವಾಗಿ ಕೆಮ್ಮುತ್ತಿವೆ. ಇದರಿಂದ ಜನರಿಗೆ ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ ಎಂದು ಹೇಳುವ ಗ್ರಾಮಸ್ಥರು, ಬಹುಶಃ ಕೋತಿಗಳಿಗೂ ಕೊರೊನಾ ವೈರಸ್ ಹರಡಿರಬಹುದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಸ್ವಸ್ಥಗೊಂಡಿರುವ ಕೋತಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಅರಣ್ಯ ಮತ್ತು ಪಶುವೈದ್ಯರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಮಂಗಳವಾರ ಕೋತಿಗಳನ್ನು ಹಿಡಿದು ಪರೀಕ್ಷಿಸಿ,ಅವುಗಳಿಗೆ ಯಾವ ರೋಗ ಬಂದಿದೆ ಎಂಬುದನ್ನು ಖಾತ್ರಿ ಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಂಗಮಶೀಗೇನಹಳ್ಳಿ ಗ್ರಾಮದಲ್ಲಿ40ಕ್ಕೂ ಹೆಚ್ಚು ಕೋತಿಗಳು ಅಸ್ವಸ್ಥವಾಗಿವೆ ಎಂದು ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಪರೀಕ್ಷೆ ಮಾಡಲಾಗಿದೆ. ಕೋತಿಗಳು ಸುಸ್ತಾಗಿ ಬಿದ್ದಿದ್ದವು.ಅದರಲ್ಲಿ ಒಂದು ಕೋತಿ ಕೆಮ್ಮುತ್ತಿತ್ತು. ಆದರೆ, ಅವುಗಳನ್ನು ಹಿಡಿಯವರು ಯಾರು ಇಲ್ಲದಕಾರಣ ವಾಪಸ್ಸಾಗಿದ್ದೇವೆ. ಮಂಗಳವಾರ ಅರಣ್ಯ ಇಲಾಖೆಯವರು ಹಿಡಿದುಕೊಡುವುದಾಗಿ ಹೇಳಿದ್ದಾರೆ. ನಂತರ ರೋಗ ಪತ್ತೆ ಹಚ್ಚಲಾಗುವುದು ಎಂದು ತಾಲೂಕು ಪಶು ಸಂಗೋಪನಾಇಲಾಖೆಯ ಹಿರಿಯ ವೈದ್ಯ ಬೈರೆಡ್ಡಿ ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಸದ್ಯ ಒಬ್ಬರೇ ಪಶು ವೈದ್ಯರಿದ್ದು, ಅವರು ಮೈಸೂರಿನಲ್ಲಿ ಇರುತ್ತಾರೆ. ಕೋತಿಗಳ ಸ್ಥಿತಿಗತಿ ಹೇಳಲು ನಮಗೆ ಆಗಿಲ್ಲ.ಅರಣ್ಯ ಇಲಾಖೆಯಿಂದ ಕೋತಿಗಳನ್ನುಹಿಡಿದು ಕೊಟ್ಟರೆ ಪರೀಕ್ಷಿಸುವುದಾಗಿ ಪಶು ವೈದ್ಯರು ಹೇಳಿದ್ದಾರೆ.ಅದರಂತೆ ಮಂಗಳವಾರ ರಾಯಲ್ಪಾಡಿನಿಂದ ಕೋತಿ ಹಿಡಿಯಲು ಬರುತ್ತಿದ್ದು, ಪರೀಕ್ಷಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
-ಧನಲಕ್ಷ್ಮೀ, ಅರಣ್ಯ ಅಧಿಕಾರಿ, ಚಿಂತಾಮಣಿ.