Advertisement
ಪ್ರತೀ ಬಾರಿ ಯಾರಾದರೂ ನಿಮ್ಮ ಊರು ಯಾವುದು? ನಿಮ್ಮ ಹೆಸರಿನಲ್ಲಿರುವ ಊರು ಎಲ್ಲಿದೆ? ಎಂದು ಕೇಳುವ ಪ್ರಶ್ನೆ ಒಂದು ಸಣ್ಣ ಕಥೆಯೊಂದನ್ನು ಬಿಚ್ಚಿಡುತ್ತದೆ. ಸರಿ ಸುಮಾರು ಅರವತ್ತು ವರುಷಗಳ ಹಿಂದೆ ಹರದೂರು ಎಂಬ ಪುಟ್ಟ ಹಳ್ಳಿಯೊಂದು ಶರಾವತಿ ನದಿಯಲ್ಲಿ ಮುಳುಗಡೆಯಾದಾಗ, ಆ ಊರುಬಿಟ್ಟು ಹೊಸ ಬದುಕೊಂದು ಕಟ್ಟಿಕೊಳ್ಳಲು ಸಾಗರಕ್ಕೆ ಕಾಲಿಟ್ಟ ಅಪ್ಪನಿಗೆ ಆಗ ವಯಸ್ಸು ಹದಿನಾಲ್ಕು. ಆ ಚಿಕ್ಕ ವಯಸ್ಸಿನಲ್ಲಿಯೇ ಜವಾಬ್ದಾರಿ ಹೊತ್ತ ಅಪ್ಪ ಬದುಕು ಕಟ್ಟಿಕೊಂಡ ರೀತಿ ಇಂದಿಗೂ ನನ್ನ ಬದುಕಿಗೆ ಸ್ಫೂರ್ತಿ.
Related Articles
Advertisement
ತೀರ್ಥಹಳ್ಳಿಯಲ್ಲಿ ನನ್ನ ಕಾಲೇಜಿನ ಓದು ಮುಗಿಯುವಷ್ಟರಲ್ಲಿ ಸಾಗರವೆಂಬ ಹೆಸರು ನಿಧಾನವಾಗಿ ಮನಃಪಟಲದಿಂದ ಮರೆಯಾಗತೊಡಗಿ, ಯಾರಾದರೂ ನಿಮ್ಮೂರು ಯಾವುದೆಂದು ಕೇಳಿದರೆ ತೀರ್ಥಹಳ್ಳಿ ಅನ್ನುವ ಮಟ್ಟಿಗೆ ತೀರ್ಥಹಳ್ಳಿ ನನ್ನನ್ನು ಆವರಿಸಿತ್ತು. ನನ್ನ ಬದುಕಿಕೊಂಡು ಹೊಸ ಆಯಾಮವನ್ನೇ ತಂದುಕೊಟ್ಟ ಊರು, ಆತ್ಮೀಯ ಸ್ನೇಹ, ಪ್ರೀತಿಯನ್ನು ಗಳಿಸಿಕೊಟ್ಟ ಊರು ತೀರ್ಥಹಳ್ಳಿ ಎಂದರೆ ತಪ್ಪಾಗಲಾರದು.
ಬದುಕು ಕಟ್ಟಿಕೊಳ್ಳುವ ಹಂತಕ್ಕೆ ನಾವು ಬಂದಾಗ ಮತ್ತೆ ಊರುಗಳು ಬದಲಾಗುತ್ತದೆ. ಹಾಗೆಯೇ ಕೆಲಸದ ಬೇಟೆಗೆ, ಕಂಡ ಕನಸನ್ನು ನನಸು ಮಾಡಿಕೊಳ್ಳಲು ನಾನು ಕಾಲಿಟ್ಟ ಊರು ಬೆಂಗಳೂರು. ಕನಸುಗಳನ್ನು ಕಟ್ಟಿಕೊಂಡು ಏನನ್ನೋ ಸಾಧಿಸುವ ಉಮೇದಿನೊಂದಿಗೆ ಬರುವ ಎಲ್ಲರನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಸಲಹುವ ಊರು ಬೆಂಗಳೂರು. ಬದುಕಿನ ಪ್ರತಿಯೊಂದು ಹಂತದಲ್ಲೂ ಪುಟ್ಟ ಮಗುವಿನಂತೆ ಹೊಸ ಹೊಸ ಪಾಠ ಕಲಿಯುತ್ತ , ತೆವಳುತ್ತ, ಕುಂಟುತ್ತಾ, ಬೀಳುತ್ತಾ, ಎದ್ದು ನಡೆಯುತ್ತಾ , ಓಡುವ ಹಂತಕ್ಕೆ ಬರುವ ಬರುವಷ್ಟರಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಏಳುವ ದೂಳಿನಂತೆ ಬೆಂಗಳೂರೆಂಬ ಮಹಾನಗರದಲ್ಲಿ ಬೆರೆತು ಹೋಗಿಬಿಟ್ಟಿರುತ್ತಿವೆ. ಆ ರೀತಿ ಬದಲಾಯಿಸುವ ಶಕ್ತಿ ಬೆಂಗಳೂರಿಗಿದೆ.
ನಮ್ಮೂರಿಂದ ಬರುವವರಿಗೆ ನಾನು ಬೆಂಗಳೂರಿನಲ್ಲಿದ್ದೇನೆ ಅಂದರೆ ಸಾಕೆ? ಇಲ್ಲ, ಬೆಂಗಳೂರಲ್ಲಿ ಯಾವ ಏರಿಯಾ? ಎಂಬ ಪ್ರಶ್ನೆ ಸಹಜ. ಬೆಂಗಳೂರಿನ ಒಂದು ಪ್ರದೇಶದಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ಕೇವಲ ನಮ್ಮ ವಿಳಾಸದ ಕೊನೆಯಲ್ಲಿ ಬರುವ ಪಿನ್ ಕೋಡಿನಂತೆ ತಣ್ಣಗೆ ಇದ್ದರೂ ಇರದ ಹಾಗೆ ಇರಲು ಆರಂಭ ಮಾಡುತ್ತದೆ ಅಷ್ಟೇ. ಏಕೆಂದರೆ ನಾವು ಜಯನಗರ, ಜೆ.ಪಿ. ನಗರ, ಮಲ್ಲೇಶ್ವರಂ, ವಿದ್ಯಾರಣ್ಯಪುರ ಹೀಗೆ ಯಾವುದೋ ಪ್ರದೇಶವನ್ನು ನಮ್ಮೂರನ್ನಾಗಿ ಮಾಡಿಕೊಂಡುಬಿಟ್ಟಿರುತ್ತೇವೆ. ಇಪ್ಪತ್ತು ವರುಷಗಳ ಕಾಲ ಬೆಂಗಳೂರಿನಲ್ಲಿದ್ದರೂ ಬೆಂಗಳೂರಿನವರಿಗೆ ನಾನು ತೀರ್ಥಹಳ್ಳಿಯವನಾಗಿದ್ದೆ.
ದಿನಗಳು ಕಳೆದಂತೆ ಬದುಕು ಕಟ್ಟಿಕೊಳ್ಳುವ ಹಂತಕ್ಕೆ ಬಂದಾಗ ಊರುಗಳು ಬದಲಾಗುತ್ತವೆ ಎಂಬ ಅನುಭವ ಬದಲಾಗಿ ದೇಶಗಳು ಕೂಡ ಬದಲಾಗುತ್ತದೆ ಎಂಬ ಸತ್ಯ ಅರಿವಿಗೆ ಬಂದಿತ್ತು. ಬದುಕಿನಲ್ಲಿ ಸಿಕ್ಕ ಮತ್ತೂಂದು ತಿರುವಿನಲ್ಲಿ ಹೊರಟ ನಾನು ತಲುಪಿದ್ದು ಸಪ್ತ ಸಾಗರದಾಚೆ ಇರುವ ನೆದರ್‌ಲ್ಯಾಂಡ್ಸ್ ಎಂಬ ದೇಶದಲ್ಲಿ. ದೇಶಗಳನ್ನು ಸುತ್ತತೊಡಗಿದ ಮೇಲೆ, ಹೊಸ ಆಲೋಚನೆಗಳು, ಹೊಸ ವಿಚಾರಧಾರೆಗಳು ಕಲಿಯುತ್ತ ಹೋದಂತೆ, ಎಲ್ಲೋ ಎಂದೋ ಭೇಟಿ ಮಾಡಿದ ಜನರು ಯಾವುದೋ ದೇಶದಲ್ಲಿ ಭೇಟಿಯಾಗತೊಡಗಿದಾಗ ಜಗತ್ತು ಬಹಳ ಸಣ್ಣದು ಎಂದು ಅನಿಸತೊಡಗಿತು. ದೇಶಗಳು ಬದಲಾದರಾದರೇನು ಅಯಸ್ಕಾಂತದ ಸೆಳೆತದಂತೆ ನನ್ನ ಊರಿನ ಸೆಳೆತ ಸದಾ ಇದ್ದೆ ಇತ್ತು. ಆ ಸೆಳೆತದ ಪ್ರಭಾವವೇನೋ ಬೆಂಗಳೂರು ಬಿಟ್ಟು ದೇಶಗಳನ್ನೇ ಬದಲಾಯಿಸಿದ ಮೇಲೆ ಇಲ್ಲಿರುವವರಿಗೆ ನಾನು ಮತ್ತೆ ಸಾಗರದವನೇ ಆಗಿದ್ದೇನೆ. ಯಾವ ಊರು ಎಂದು ಕೇಳುವವರಿಗೆ ಗುರುತು ಹಿಡಿಯಲು ಅನೂಕೂಲವಾಗಲಿ ಎಂದು ಬೆಂಗಳೂರು ಅಂತ ಹೇಳುವುದನ್ನು ಬಿಟ್ಟಿದ್ದೇನೆ. ನನ್ನ ಊರು ಎಲ್ಲಿದೆ, ಹೇಗಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಹಾಗೆ ವಿವರಿಸುವಾಗೆಲ್ಲ ಬದುಕಿನ ಒಂದು ವೃತ್ತ ಪೂರ್ತಿಯಾಗಿದೆ ಎಂದೆನಿಸುತ್ತದೆ. ಇಂದಿಗೂ ನನ್ನ ಹೆಸರಿನೊಡನೆ ಸದಾ ಉಳಿದುಕೊಂಡಿರುವುದು ವಾಸ್ತವವಾಗಿ ಅಸ್ತಿತ್ವವೇ ಇಲ್ಲದೆ ಇರುವ, ನಾ ಕಾಣದ ನನ್ನ ಅಪ್ಪ ಹುಟ್ಟಿದ ಊರು ಹರದೂರು. ಎಲ್ಲಿದೆ ಅಂತ ಯಾರಾದರೂ ಕೇಳಿದರೆ ಒಂದೇ ಪದದಲ್ಲಿ ಉತ್ತರ ನೀಡಲು ಸಾಧ್ಯವಾಗದೆ ಸಣ್ಣ ಕಥೆಯನ್ನು ನನ್ನಿಂದ ಹೇಳಿಸುತ್ತದೆ ಈ ಹರದೂರು, ನನ್ನ ಅಪ್ಪನೂರು.
ಯಾವ ದೇಶದಲ್ಲಿದ್ದರೇನು ? ನನ್ನ ಊರು ಅಲ್ಲಿದೆ….ಸಪ್ತ ಸಾಗರದಾಚೆ ಎಲ್ಲೋ…. *ಶ್ರೀನಾಥ್ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್