ನಿನ್ನ ಮುಗುಳ್ನಗೆಗೆ ಈ ನನ್ನ ಪುಟ್ಟ ಹೃದಯ ಮನಸೋತು, ಪ್ರೀತಿಯೆಂಬ ಬಾವಿಯೊಳಗೆ ಬಿದ್ದು ಒದ್ದಾಡುತ್ತಿದೆ. ಈ ನಡುವೆಯೇ ನಾನು, ನಮ್ಮ ಭವಿಷ್ಯದ ದಿನಗಳ ಬಗ್ಗೆ ಒಂದೆರಡಲ್ಲ, ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದೇನೆ…
ಹಾಯ್ ತಿಕ್ಲಿ, ಹೇಗಿದ್ದೀಯಾ?
ಈಗ ಕಾಲೇಜಿಗೆ ರಜೆ ಇರುವುದರಿಂದ ನಾವು ಭೇಟಿಯಾಗಲು ಕಾರಣಗಳೇ ಸಿಗುತ್ತಿಲ್ಲ. ಆದರೆ, ಮೊಬೈಲ್ನಲ್ಲಾದರೂ “ಹಾಯ…’ ಎಂದು ಒಂದು ಮೆಸೇಜ… ಮಾಡಬಹುದಲ್ಲ? ಅದನ್ನೂ ನೀನು ಮಾಡುತ್ತಿಲ್ಲ. ನಾನೇ ಮೆಸೇಜ್ ಮಾಡಿದರೆ, “ನನ್ನ ಹತ್ತಿರ ಲವ್ವು-ಗಿವ್ವು ಇತ್ಯಾದಿ ಆಟಗಳೆಲ್ಲ ನಡೆಯೊಲ್ಲ ಜಸ್ಟ್ ಫ್ರೆಂಡಾಗಿ ಮಾತ್ರ ಮಾತಾಡು’ ಅಂತಿಯಾ! ಆ ಕಾರಣದಿಂದ ನಾನೂ ನಿನಗೆ ಮೆಸೇಜ… ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೇನೆ. ನೀನು ಮೆಸೇಜ… ಮಾಡಿದರೂ, ಮಾಡದಿದ್ದರೂ, ನಾನು ಪ್ರತಿದಿನ, ಪ್ರತಿಕ್ಷಣ ನಿನ್ನ ನೆನಪಲ್ಲೇ ಜೀವಿಸುತ್ತಿದ್ದೇನೆ. ಕಾರಣ ಗೊತ್ತಿರಬೇಕಲ್ಲ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ!
ನಿನ್ನ ಕಣ್ಣಿಗೆ ನಾನು ಪ್ಯಾಂಟು-ಶರ್ಟು ಧರಿಸಿದ ಒಬ್ಬ ಸಾಮಾನ್ಯ ಹುಡುಗನಂತೆ ಮಾತ್ರ ಕಾಣಬಹುದು. ಆದರೆ, ಅದೇ ಹುಡುಗನ ಕಣ್ಣುಗಳಿಗೆ ನೀನೇ ಒಂದು ಪ್ರಪಂಚ ಎನ್ನುವುದು ನಿನಗೆ ಗೊತ್ತಿಲ್ಲ. ನೀನಾಡುವ ಚಂದದ ಮಾತು, ನೀ ಮಾಡುವ ಮಂಗಚೇಷ್ಟೆ, ಸಣ್ಣ ಮಕ್ಕಳಂತೆ ಪ್ರತಿಯೊಂದು ಹಠ ಮಾಡಿ ಸಾಧಿಸುವ ನಿನ್ನ ಗುಣ, ಮಕ್ಕಳಾಟ ನೋಡಿದವರೆಲ್ಲ ನಿನ್ನನ್ನು ಮುದ್ದಾಗಿ “ತಿಕ್ಲಿ’ ಎಂದು ಕರೆಯುತ್ತಾರೆ. ಆದರೆ, ಆ ತಿಕ್ಕಲುತನವೇ ನನಗೆ ಇಷ್ಟವಾಗಿದ್ದು. ಬಹುತೇಕ ಹುಡುಗರು, ಹುಡುಗಿಯರ ಅಂದಚೆಂದ ನೋಡಿ ಪ್ರೀತಿಸುವುದಿಲ್ಲ. ಮಗುವಿನಂಥ ಮನಸ್ಸು ಮತ್ತು ಹುಡುಗಿಯ ಸಣ್ಣ ಸಣ್ಣ ಚೇಷ್ಟೆಗಳಿಗೆ ಮನಸೋಲುತ್ತಾರೆ. ಹಾಗೆಯೇ ನಾನೂ ಕೂಡ! ಹೆಣ್ಣಿಗೆ ಇರಬೇಕಾದ ಎಲ್ಲಾ ಸದ್ಗುಣಗಳನ್ನು ನಾನು ನಿನ್ನಲ್ಲಿ ಕಂಡಿದ್ದೇನೆ. ಅವೆಲ್ಲವುಗಳ ಕಿರೀಟಪ್ರಾಯವಾಗಿರುವುದು ನಿನ್ನ ತುಟಿಗಳ ಮೇಲೆ ಯಾವಾಗಲೂ ರಾರಾಜಿಸುವ ಮುಗುಳುನಗೆ. ನನ್ನ ಈ ಪುಟ್ಟ ಹೃದಯ ಅದಕ್ಕೆ ಮನಸೋತು ಪ್ರೀತಿಯೆಂಬ ಬಾವಿಯೊಳಗೆ ಬಿದ್ದು ಈಜು ಬರದೇ, ಒದ್ದಾಡುತ್ತಿದೆ. ನೀನು ಏನೇ ಕಾರಣಗಳನ್ನು ನೀಡಿದರೂ , ನೀನು ನನ್ನನ್ನು ಎಷ್ಟೇ ದೂರವಿಟ್ಟರೂ ನನ್ನ ಮನಸೇಕೋ ನಿನ್ನನ್ನೇ ಬಯಸುತ್ತಿದೆ. ನಿನಗಿಂತ ಸುಂದರಿಯರು, ಚಂದುಳ್ಳಿಚೆಲುವೆಯರು ಕಣ್ಮುಂದೆ ಇದ್ದರೂ ನಿನ್ನನ್ನು ಬಿಟ್ಟು ಬೇರೆ ಯಾರೂ ಕಾಣಿಸುತ್ತಿಲ್ಲ. ಹುಡುಗಿಯರ ಜೊತೆ ಮಾತೂ ಆಡದ ನನ್ನಂಥವನನ್ನು ಪ್ರೀತಿಯಲ್ಲಿ ಬೀಳಿಸಿದ ನೀನು ತುಂಬಾನೇ ಗ್ರೇಟ್.
ಇಂದಲ್ಲಾ ನಾಳೆ ನಮ್ಮಿಬ್ಬರ ನಡುವಿನ ದೂರ ಕಡಿಮೆಯಾಗಿ, ನನ್ನ ಪ್ರೀತಿ ನಿನಗೆ ಅರ್ಥವಾಗಿ, ಅದನ್ನು ನೀನು ಒಪ್ಪಿಕೊಳ್ಳುವೆ ಎಂದು ಆಶಿಸುತ್ತಾ…
ಗಿರೀಶ್ ಚಂದ್ರ ವೈ.ಆರ್.