ದುಬಾೖ: ಭಾರತದ ಭರವಸೆಯ ಆರಂಭಕಾರ ಶುಭಮನ್ ಗಿಲ್ ಐಸಿಸಿಯ ಜನವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜರಾಗಿದ್ದಾರೆ. ವನಿತಾ ವಿಭಾಗದ ಈ ಗೌರವ ಇಂಗ್ಲೆಂಡ್ ಅಂಡರ್-19 ತಂಡದ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ ಅವರಿಗೆ ಒಲಿಯಿತು.
23 ವರ್ಷದ ಶುಭಮನ್ ಗಿಲ್ ಜನವರಿಯಲ್ಲಿ ಬ್ಯಾಟಿಂಗ್ ಫಾರ್ಮ್ನ ಉತ್ತುಂಗದಲ್ಲಿದ್ದರು. ಏಕದಿನದಲ್ಲಂತೂ ರನ್ ಪ್ರವಾಹವನ್ನೇ ಹರಿಸಿದ್ದರು. ಈ ಅವಧಿಯಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಆಡಿದ 6 ಪಂದ್ಯಗಳಲ್ಲಿ 567 ರನ್ ಪೇರಿಸಿದ ಹಿರಿಮೆ ಗಿಲ್ ಅವರದು. ಇದರಲ್ಲಿ ಒಂದು ದ್ವಿಶತಕ, 2 ಶತಕ ಸೇರಿತ್ತು.
ಜನವರಿ ತಿಂಗಳ ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದಿಬ್ಬರೆಂದರೆ ನ್ಯೂಜಿಲ್ಯಾಂಡ್ ಆರಂಭಕಾರ ಡೇವನ್ ಕಾನ್ವೇ ಮತ್ತು ಭಾರತದವರೇ ಆದ ಪೇಸರ್ ಮೊಹಮ್ಮದ್ ಸಿರಾಜ್.
ವನಿತಾ ವಿಭಾಗದ ಪ್ರಶಸ್ತಿಗೆ ಪಾತ್ರರಾದ ಗ್ರೇಸ್ ಸ್ಕ್ರಿವೆನ್ಸ್ ಅಂಡರ್-19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಫೈನಲ್ ತನಕ ಕೊಂಡೊಯ್ದಿದ್ದರು. 41.85ರ ಸರಾಸರಿಯಲ್ಲಿ 293 ರನ್ ಗಳಿಸಿದ್ದು ಗ್ರೇಸ್ ಹಿರಿಮೆ. 7.11ರ ಸರಾಸರಿಯಲ್ಲಿ 9 ವಿಕೆಟ್ ಕೂಡ ಉರುಳಿಸಿದ್ದರು.
ವನಿತಾ ವಿಭಾಗದ ಪ್ರಶಸ್ತಿ ರೇಸ್‌ನಲ್ಲಿ ಇಂಗ್ಲೆಂಡ್‌ನ ಫೋಬ್ ಲಿಚ್‌ಫೀಲ್ಡ್, ಆಸ್ಟ್ರೇಲಿಯದ ಬೆತ್ ಮೂನಿ ಕೂಡ ಇದ್ದರು.