ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶಕ್ತಿ ದೇವತೆಯಾದ ಶ್ರೀ ದುರ್ಗಾಂಬಾ ಮಹಾರಥೋತ್ಸವವು ಭಕ್ತ ಸಮೂಹದ ಜಯಘೋಷದೊಂದಿಗೆ ಶುಕ್ರವಾರ ದುರ್ಗಾ ದೇವಸ್ಥಾನದಲ್ಲಿ ನಡೆಯಿತು.
ಮಹಾರಥೋತ್ಸವಕ್ಕೆ ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಆಗಮಿಸಿದ್ದರು. ಶ್ರೀ ದುರ್ಗಮ್ಮನವರ ರಥೋತ್ಸವದ ಅಂಗವಾಗಿ ಬೆಳಗ್ಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದುರ್ಗಾ ಸಪ್ತಶತಿ ಪಾರಾಯಣ, ತುಲಾಭಾರ ಸೇವೆ, ಕುಂಕುಮಾರ್ಚನೆ ಸೇವೆ ನಡೆಯಿತು. ಚಂಡಿ ಪಾರಾಯಣದ ನಂತರ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಮಹಾಮಂಗಳಾರತಿ ನಡೆಯಿತು. ನಂತರ ದುರ್ಗಾಂಬಾ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಮೂರು ಪ್ರದಕ್ಷಿಣೆ, ಬಲಿಪೂಜೆ ನಡೆಯಿತು. ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಕೆರೋಡಿ, ಸಾರದಬಾಗಿಲು, ಹೆಮ್ಮನೆ ಮೂಲಕ ದುರ್ಗಾ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು. ಜಗದ್ಗುರುಗಳಿಗೆ ಭಕ್ತರು ಫಲ, ಪುಷ್ಪ ಸಮರ್ಪಿಸಿದರು.
ರಥವನ್ನು ದೇವಸ್ಥಾನದಿಂದ ಅಲ್ಪ ದೂರದವರೆಗೆ ಎಳೆದು ನಿಲ್ಲಿಸಲಾಯಿತು. ಭಕ್ತರ ಜಯಘೋಷ, ಸದ್ವಿದ್ಯಾ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ರಥೋತ್ಸವದಲ್ಲಿ ಆನೆ, ಅಶ್ವ, ಛತ್ರಚಾಮರ, ಮಕರ ತೋರಣ, ವಾದ್ಯಮೇಳಗಳು ಉತ್ಸವದ ಮೆರುಗನ್ನು ಹೆಚ್ಚಿಸಿತು.
ಶ್ರೀಮಠದ ಅಧಿಕಾರಿಗಳಾದ ವಿ.ಆರ್. ಗೌರಿಶಂಕರ್, ಶ್ರೀಪಾದರಾವ್, ಶಿವಶಂಕರಭಟ್, ಗೋಪಾಲಕೃಷ್ಣ, ರಾಮಕೃಷ್ಣಯ್ಯ, ಜಗದ್ಗುರುಗಳ ಆಪ್ತ ಸಹಾಯಕರಾದ ಕೃಷ್ಣಮೂರ್ತಿ ಭಟ್, ಶಮಂತ ಶರ್ಮ ಇದ್ದರು. ರಥೋತ್ಸವದ ಧಾರ್ಮಿಕ ವಿಧಿ- ವಿಧಾನಗಳು ಶ್ರೀಮಠದ ಪುರೋಹಿತರಾದ ಕೃಷ್ಣಭಟ್, ಶಿವಕುಮಾರ ಶರ್ಮ, ಸೀತಾರಾಮ ಶರ್ಮ ನೇತೃತ್ವದಲ್ಲಿ ನಡೆದವು. ಶನಿವಾರ ಓಕುಳಿ ಉತ್ಸವ, ಸಂಜೆ ಧ್ವಜಾರೋಹಣ ನಡೆಯಲಿದೆ.
ರಥೋತ್ಸವದ ಅಂಗವಾಗಿ ಶ್ರೀ ದುರ್ಗಾಂಬಾ ಸನ್ನಿಧಿಯಲ್ಲಿ ತಳಿರು- ತೋರಣ, ವಿದ್ಯುದ್ದೀಪಾಲಂಕಾರ, ಬಾಳೆಕಂಬ, ರಂಗೋಲಿ ಹಾಕುವುದರ ಮೂಲಕ ಮೆರುಗು ಹೆಚ್ಚಿಸಲಾಗಿತ್ತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಇದ್ದರು. ಜಾತ್ರೆಯ ಅಂಗವಾಗಿ ರಸ್ತೆಯ ಎರಡು ಬದಿಯಲ್ಲಿ ವಿವಿಧ ಅಂಗಡಿಗಳು ತೆರೆದಿದ್ದವು. ಸಹಸ್ರಾರು ಭಕ್ತಾದಿಗಳು ಮಧ್ಯಾಹ್ನದ ಭೋಜನ ಸ್ವೀಕರಿಸಿದರು.