ಚಿತ್ರರಂಗದಲ್ಲಿ ಅವರು ಕೀ ಬೋರ್ಡ್ ಪ್ಲೇಯರ್ ಆಗಿದ್ದವರು. “ಸಂಗೀತ ಬ್ರಹ್ಮ’ ಹಂಸಲೇಖ ಅವರಿಂದ ಹಿಡಿದು ಕನ್ನಡ ಚಿತ್ರರಂಗದ ಈಗಿನ ಬಹುತೇಕ ಸಂಗೀತ ನಿರ್ದೇಶಕರ ಬಳಿ ಕೀ ಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದ್ದರು. ಅಲ್ಲಿಯವರೆಗೂ ಕೇವಲ ಸಂಗೀತ ನಿರ್ದೇಶಕರಿಗಷ್ಟೇ ಗೊತ್ತಿದ್ದ ಅವರು, “ಮುಸ್ಸಂಜೆ ಮಾತು’ ಎಂಬ ಸಿನಿಮಾ ಹೊರಬರುತ್ತಿದ್ದಂತೆಯೇ, ಅದರ ಹಾಡುಗಳ ಮೂಲಕ ಎಲ್ಲರ ಮನೆ ಮಾತಾಗಿಬಿಟ್ಟರು. ಅದರಲ್ಲೂ “ಮುಸ್ಸಂಜೆ ಮಾತು’ ಸಿನಿಮಾದ “ಏನಾಗಲಿ ಮುಂದೆ ಸಾಗು ನೀ …’ ಹಾಡು ಎಲ್ಲಾದರೂ ಕೇಳಿಬರುತ್ತಿದ್ದರೆ, ಈಗಲೂ ಅಲ್ಲೊಂದು ಕ್ಷಣ ನಿಂತು ಆ ಹಾಡನ್ನು ಪೂರ್ತಿಯಾಗಿ ಕೇಳಿಯೇ ಮುಂದೆ ಹೋಗಬೇಕು ಎನಿಸುವಂಥ ಮನಮುಟ್ಟುವ ಭಾವಪೂರ್ಣ ಹಾಡನ್ನು ರಚಿಸಿ, ಸಂಗೀತ ಸಂಯೋಜಿಸಿದ್ದು ವಿ. ಶ್ರೀಧರ್ ಸಂಭ್ರಮ್.
ಮೊದಲ ಸಿನಿಮಾದಲ್ಲೇ ಸಿನಿಮಂದಿಯ ಗಮನ ಸೆಳೆಯುವಂಥ ಹಾಡುಗಳನ್ನು ಕೊಟ್ಟ ವಿ. ಶ್ರೀಧರ್ ಸಂಭ್ರಮ್, ಸಂಗೀತ ನಿರ್ದೇಶಕನಾಗಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ 15 ವರ್ಷಗಳಲ್ಲಿ ಹೊಸಬರಿಂದ ಹಿಡಿದು, ಬಿಗ್ ಸ್ಟಾರ್ವರೆಗೆ ಬರೋಬ್ಬರಿ 50ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿ, ಎಲ್ಲ ಥರದ ಟ್ರೆಂಡ್‌ಗೂ ನಿಲುಕುವ ಸಂಗೀತ ನಿರ್ದೇಶಕ ಎನಿಸಿಕೊಂಡ ಹೆಗ್ಗಳಿಗೆ ಶ್ರೀಧರ್ ಸಂಭ್ರಮ್ ಅವರದ್ದು.
“ಕಳೆದ ಹದಿನೈದು ವರ್ಷಗಳಲ್ಲಿ ನಾನು ಸಂಗೀತ ನೀಡಿದ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. “ಮುಸ್ಸಂಜೆ ಮಾತು’ ದೊಡ್ಡ ಮ್ಯೂಸಿಕಲ್ ಹಿಟ್ ಆದಂತಹ ಚಿತ್ರ. ಅದಾದ ಬಳಿಕ “ಕೃಷ್ಣನ್ ಲವ್‌ಸ್ಟೋರಿ’, “ಕೃಷ್ಣನ್ ಮ್ಯಾರೇಜ್ ಸ್ಟೋರಿ’, “ಕೃಷ್ಣ ರುಕ್ಕು’, “ಕೃಷ್ಣ ಲೀಲ’ ಈ ನಾಲ್ಕು ಸೀರೀಸ್ ಸಿನಿಮಾಗಳ ಹಾಡುಗಳೂ ನನಗೆ ಒಳ್ಳೆಯ ಹೆಸರು ತಂದುಕೊಟ್ಟವು. ಬಹುಶಃ ನಾಲ್ಕು ಸೀರಿಸ್ ಸಿನಿಮಾಗಳಿಗೆ ಸಂಗೀತ ಕೊಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇದು ಇಂಡಿಯಾದಲ್ಲೇ ಯಾವ ಕಂಪೋಸರ್‌ಗೂ ಸಿಗದ ಅವಕಾಶ. “ಮುಸ್ಸಂಜೆ ಮಾತು’ ಸಿನಿಮಾದಿಂದ ಶುರುವಾದ ನನ್ನ ಮ್ಯೂಸಿಕ್ ಜರ್ನಿ ಈಗ “ಸಂಜು ವೆಡ್ಸ್ ಗೀತಾ 2′ ಸಿನಿಮಾದವರೆಗೂ ಮುಂದುವರೆದಿದೆ’ ಎನ್ನುತ್ತಾರೆ ವಿ. ಶ್ರೀಧರ್ ಸಂಭ್ರಮ್.
“ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಸಿನಿಮಾದಲ್ಲೂ ಸಕ್ಸಸ್ ಮತ್ತು ಫೇಲ್ಯೂರ್ ಅನ್ನೋದು ಸಹಜ. ಆದರೆ, ನನ್ನ ಮಟ್ಟಿಗೆ ಹೇಳುವುದಾದರೆ, ಸಕ್ಸಸ್ ಬಂದಾಗ ನಾನು ಹಿಗ್ಗಿಲ್ಲ. ಆದರೆ, ಫೇಲ್ಯೂರ್ ಆದಾಗ ಒಂದಷ್ಟು ಕಣ್ಣೀರು ಹಾಕಿದ್ದು ಇದೆ. ಇವತ್ತು ನಾನೇನಾದರೂ ಸಾಧಿಸಿದ್ದೇನೆ ಅನ್ನುವುದಾದರೆ ಅದಕ್ಕೆ ಕಾರಣ, ನನ್ನೊಳಗಿರುವ ಭಯ. ಅದೇ ನನ್ನನ್ನು ಕಾಪಾಡುತ್ತಿದೆ. ಲೈಫಲ್ಲಿ ಎಲ್ಲವನ್ನೂ ನಾನು ಚಾಲೆಂಜಿಂಗ್ ಆಗಿ ತೆಗೆದುಕೊಂಡವನು. ಹಾಗಾಗಿಯೇ ಒಂದಷ್ಟು ಯಶಸ್ಸು ಉಳಿಸಿಕೊಂಡು, ಗಳಿಸಿಕೊಂಡು ಬರುತ್ತಿದ್ದೇನೆ. ಇಲ್ಲಿ ಗೆಲುವು, ಸೋಲು ಕಾಮನ್. ಎರಡನ್ನೂ ಸಮಾನವಾಗಿಯೇ ನೋಡಿದ್ದೇನೆ. ಹಾಗಾಗಿ ನನಗೆ ಸಂಗೀತ ಕೆಲಸದ ಮೇಲೆ ಭಯ, ಭಕ್ತಿ ಜಾಸ್ತಿ ಹೊರತು, ಬೇರೆ ಯಾವುದರ ಮೇಲೂ ಇಲ್ಲ. ಯಾವುದೇ ಒಬ್ಬ ಸಾಧಕ ಕೇವಲ ಒಬ್ಬನೇ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ನನ್ನ ಸಂಗೀತಕ್ಕೆ ಸಾಥ್ ಕೊಟ್ಟವರ ಸಂಖ್ಯೆ ದೊಡ್ಡದಾಗಿದೆ. ಇಂದು ನನ್ನ ಸಕ್ಸಸ್ ಹಿಂದೆ ನನ್ನ ನಿರ್ದೇಶಕರು, ನಿರ್ಮಾಪಕರು, ಸಂಗೀತಗಾರರು, ಗೀತರಚನೆಕಾರರಿದ್ದಾರೆ. ಅವರೆಲ್ಲರಿಗೂ ಈ ಗೌರವ ಸಲ್ಲಬೇಕು. ಎಲ್ಲರ ಸಹಕಾರ, ಪ್ರೋತ್ಸಾಹದಿಂದಾಗಿ ಇಂದು ನನ್ನ ಸಂಗೀತಕ್ಕೆ ಒಂದಷ್ಟು ಮಹತ್ವ ಸಿಕ್ಕಿದೆ’ ಎನ್ನುವುದು ಶ್ರೀಧರ್ ಮಾತು.