ಬೀದರದ ಸುಕ್ಷೇತ್ರ ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ಮತ್ತೆ ಪ್ರಜ್ವಲಿಸುತ್ತಿದ್ದಾನೆ.
ಚುನಾವಣೆ ಸಮೀಪಿಸುತ್ತಿದೆ. ವರವ ಕೊಡು ಎಂದು ದೇವರನ್ನು ಪ್ರಾರ್ಥಿಸುವ ಮಂದಿ ಹೆಚ್ಚಾಗುತ್ತಿದ್ದಾರೆ. ಜಿಲ್ಲೆಯ ಸುಕ್ಷೇತ್ರ ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಹರಕೆ ಹೊತ್ತರೆ ರಾಜಕಾರಣಿಗಳ ಇಷ್ಟಾರ್ಥ ಸಿದ್ಧಿಸುತ್ತೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ಇತ್ತಾಗ ಶುರುವಾಯ್ತು ಪಂಕ್ತಿ ದರ್ಶನ.
ಎರಡನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷೆ ಹಿಡಿದಿರುವ ಡಾ. ಜಿ. ಪರಮೇಶ್ವರ್ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಮಾಡಿದ್ದು ನಂಬಿಕೆ ಮತ್ತೂಮ್ಮೆ ಎಲ್ಲರಿಗೂ ಜ್ಞಾಪಿಸಿದಂತೆ ಆಗಿದೆ.
ಚುನಾವಣೆ ಬಿರುಸುಕೊಂಡಾಗ ಮತ್ತು ರಾಜಕಾರಣದಲ್ಲಿ ಸಂಕಷ್ಟ ಬಂದಾಗಲೆಲ್ಲ ರಾಜಕೀಯ ನಾಯಕರುಗಳಿಗೆ ಮೊದಲು ನೆನಪಾಗುವುದೇ ಈ ರೇಕುಳಗಿ ದೇವಸ್ಥಾನ. ನೀವು ಪ್ರಧಾನಿ, ಮುಖ್ಯಮಂತ್ರಿ ಅಥವಾ ಮಂತ್ರಿ ಆಗ್ಬೇಕಂದ್ರೆ ಬೀದರಗೆ ಬರಲೇಬೇಕು ಎಂಬ ಮಾತು ಸತ್ಯವಾಗಿದೆ. ಗೆದ್ದ ಮೇಲೆ ಬೀದರ ಅನ್ನು ಜ್ಞಾಪಿಸಿಕೊಳ್ಳುತ್ತಾರೋ ಇಲ್ಲೋ, ಆದರೆ ಗೆಲ್ಲಲ್ಲು ಬೀದರ್, ಈ ದೇವಸ್ಥಾನವಂತೂ ಬೇಕೇ ಬೇಕು ಅನ್ನೋದು ಖರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತಂತೆ ಚರ್ಚೆಗಳು ಆರಂಭವಾದಾಗಲೇ ಡಾ. ಪರಮೇಶ್ವರ ತಿಂಗಳಲ್ಲೇ ಎರಡು ಬಾರಿ ಈ ಸನ್ನಿಧಿಗೆ ಭೇಟಿ ನೀಡಿದ್ದರು. ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಗಾಗಿ ಪ್ರಾರ್ಥಿಸಲು ಬಂದಿದ್ದೇನೆ ಅಂತ ಮಾತಿಗೆ ಬಣ್ಣ ಬಳಿದರೂ, ಮತ್ತೂಂದು ಅವಧಿಯ ಕೆಪಿಸಿಸಿ ಗಾಧಿಗಾಗಿ ಹರಕೆ, ವಿಶೇಷ ಪೂಜೆ ಎಂಬುದು ಸುಳ್ಳಲ್ಲ.
ಪ್ರಣಬ್ ಮುಖರ್ಜಿ ಅವರ ಸೋದರ ಸಂಬಂಧಿ ಶಾಂತಾ ಮುಖರ್ಜಿ ಅವರಿಗೆ ಶಂಭುಲಿಂಗೇಶ್ವರ ಮಹಿಮೆ ಗೊತ್ತಿದೆ. ಅವರ ಸಲಹೆಯಂತೆ 2000ರಲ್ಲಿ ರೇಕುಳಗಿ ಮೊದಲ ಬಾರಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ನಂತರ ಪ್ರಧಾನಿ ಆಕಾಂಕ್ಷಿ$ಯಾಗಿದ್ದ ಪ್ರಣಬ್ 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಪೂಜೆ ಸಲ್ಲಿಸಿದ್ದರು. “ದೇಶದ ಪ್ರಮುಖ ಹುದ್ದೆಗಳನ್ನು ಅಲಂಕರಿಸುವಿರಿ’ ಎಂಬ ಆಶೀರ್ವಾದ ಪಡೆದು ಮತ್ತೆ ದೇಗುಲಕ್ಕೆ ಬಂದು ಹರಕೆ ತೀರಿಸುವುದಾಗಿ ಬೇಡಿಕೊಂಡಿದ್ದರಂತೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಅವರ ಸೊಸೆ ಚಿತ್ರಲೇಖಾ ಮತ್ತು ಮೊಮ್ಮಗ ಅರ್ಜುನ ರೇಕುಳಗಿ ದೇಗುಲದಲ್ಲಿ ಕಾಣಿಸಿಕೊಂಡಿದ್ದರು.
ಶಂಭುಲಿಂಗೇಶ್ವರ ಕೃಪೆಗಾಗಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದಾಗ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಸುಕ್ಷೇತ್ರದ ದರ್ಶನ ಪಡೆದಿದ್ದು ಉಂಟು. ಉದ್ಯಮಿ ಅನಿಲ್ ಅಂಬಾನಿ, ಎಸ್.ಎಂ ಕೃಷ್ಣ, ಧರಂಸಿಂಗ್, ಮಾಜಿ ಸಚಿವ ಎ.ಕೆ ಆಂಟನಿ, ಸಂಸದ ಎಚ್. ವಿಶ್ವನಾಥ ಶಾಸಕರಾದ ರೇವಣ್ಣ, ಕರುಣಾಕರರೆಡ್ಡಿ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
ಹೈ-ಕ ಭಾಗದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಶಂಭುಲಿಂಗೇಶ್ವರ ಮಂದಿರಕ್ಕೆ ಭೇಟಿ ನೀಡಿದವರಿಗೆಲ್ಲ ಜಯ ನಿಶ್ಚಿತ ಎಂಬ ಪರಿಪಾಠ ಇದೆ ಎನ್ನುತ್ತಾರೆ ಮುಖ್ಯ ಅರ್ಚಕ ಎನ್.ವಿ ರೆಡ್ಡಿ ಗುರೂಜಿ.
ಹರಕೆ ಹೊತ್ತಿದ್ದರು ಪರಂ
ಡಾ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿ ಎರಡನೇ ಅವಧಿಗೂ ಮುಂದುವರೆಯುವ ಆಸಕ್ತಿ ಹೊಂದಿದ್ದರು. ಅದಕ್ಕಾಗಿ ರೇಕುಳಗಿ ಶ್ರೀ ಶಂಭುಲಿಂಗೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದರು. ದೇವರ ಕೃಪೆ ಅವರ ಮೇಲೆ ಮತ್ತೂಮ್ಮೆ ತೋರಿದ್ದು, ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಮೇಲೆ ಅವರು ಅಪಾರ ನಂಬಿಕೆ, ಭಕ್ತಿಯನ್ನು ಹೊಂದಿದ್ದಾರೆ.
“ವಿಐಪಿ ದೇವಸ್ಥಾನ
ಹೈ-ಕ ಭಾಗದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಶಂಭುಲಿಂಗೇಶ್ವರ ಮಂದಿರಕ್ಕೆ ಭೇಟಿ ನೀಡಿದವರಿಗೆಲ್ಲ ಜಯ ನಿಶ್ಚಿತ ಎಂಬ ಪರಿಪಾಠ ಇದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದವರ ಪಟ್ಟಿ ಬೆಳೆಯುತ್ತ ಹೋಗುತ್ತದೆ ಎನ್ನುತ್ತಾರೆ ಮುಖ್ಯ ಅರ್ಚಕ ಎನ್.ವಿ ರೆಡ್ಡಿ ಗುರೂಜಿ.
ಶಶಿಕಾಂತ ಬಂಬುಳಗೆ