ಉಡುಪಿ: ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದಿಂದ ವಿಶ್ವಾರ್ಪಣಮ್ 30ನೇ ಕಾರ್ಯಕ್ರಮವಾಗಿ ಮಾ. 23ರ ಸಂಜೆ 3.30ಕ್ಕೆ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಗುರುವಂದನೆ ನಡೆಯಲಿದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ, ಅನಂತರ ನಡೆದ ಮಂಡಲೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಉಡುಪಿಗೆ ಆಗಮಿಸಿರುವ ಪೇಜಾವರ ಶ್ರೀಪಾದರಿಗೆ ಗುರುವಂದನೆ ಏರ್ಪಡಿಸಲು ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಒತ್ತಾಸೆಯಂತೆ ವಿಶ್ವಾರ್ಪಣಮ್ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಪೇಜಾವರ ಶ್ರೀಪಾದರು 60 ಸಂವತ್ಸರ ಗಳನ್ನು ಪೂರೈಸಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಸಮರ್ಪಿಸಿದ್ದಾರೆ ಎಂದು ತಿಳಿಸಿದರು.
ಪೇಜಾವರ ಶ್ರೀಪಾದರು ತಮ್ಮ ಆಶೀರ್ವಚನ ದಲ್ಲಿ ಅಯೋಧ್ಯೆಯ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಹಾಗೂ ಮಂಡಲೋತ್ಸವದ ಚೇತೋಹಾರಿ ಸನ್ನಿವೇಶಗಳನ್ನು ವಿವರಿಸಿ ನಮ್ಮೆಲ್ಲರನ್ನು ಆಶೀರ್ವದಿ ಸಲಿದ್ದಾರೆ. ಅಯೋಧ್ಯೆಯಿಂದ ಬಂದಿರುವ ಶ್ರೀರಾಮ ದೇವರ ಮಂತ್ರಾಕ್ಷತೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಅದಮಾರು ಶ್ರೀಪಾದರು ವಿತರಿಸಿ ಅನುಗ್ರಹಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಾಗ್ಮಿಗಳಾದ ಪ್ರಕಾಶ್ ಮಲ್ಪೆ ಅವರು “ಜಗಜ್ಜನನಿ ಭಾರತ’ ಹಾಗೂ ಶ್ರೀಕಾಂತ್ ಶೆಟ್ಟಿ ಅವರು “ಅವಿನಾಶಿ ಭಾರತ’ ವಿಚಾರದಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾದ ಪಿಪಿಸಿ ನಿವೃತ್ತ ಪ್ರಾಧ್ಯಾಪಕ ಡಾ| ಬಿ.ಎಂ. ಸೋಮಯಾಜಿ, ಲೆಕ್ಕಪರಿಶೋಧಕ ವಿ.ಕೆ. ಹರಿದಾಸ ಹಾಗೂ ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನದ ಪದಾ ಧಿಕಾರಿಗಳನ್ನು ಸಮ್ಮಾನಿಸ ಲಾಗುವುದು.
ಕಲಾವಿದ ಪ್ರಾದೇಶ್ ಆಚಾರ್ಯ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವೂ ಇರಲಿದೆ ಎಂದು ವಿವರಿಸಿದರು.
ಶ್ರೀಕೃಷ್ಣ ಸೇವಾ ಬಳಗದ ಶ್ಯಾಮಪ್ರಸಾದ್ ಕುಡ್ವ, ವಿಷ್ಣುಪ್ರಸಾದ್ ಪಾಡಿಗಾರು ಮಾತನಾಡಿ, ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀಪಾದದ್ವಯರು ಗೋಪೂಜೆ ನೆರವೇರಿಸಲಿದ್ದಾರೆ. ಗೋಗ್ರಾಸ ನಿಧಿ ಅರ್ಪಣೆಗೂ ಅವಕಾಶವಿದೆ. ಶ್ರೀಪಾದರಿಗೆ ಹಾರಗಳ ಅರ್ಪಣೆ ಮಾಡುವ ಬದಲು ಗೋ ಗ್ರಾಸ ನಿಧಿ ದೇಣಿಗೆ ನೀಡುವುದರ ಮೂಲಕ ಸೇವೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಶ್ರೀಕೃಷ್ಣ ಸೇವಾ ಬಳಗದ ನಳಿನಿ ಪ್ರದೀಪ್‌ರಾವ್, ನಟೇಶ್, ಓಂಪ್ರಕಾಶ್, ಅಜಿತ್ ಪೈ, ಸುಮಿತ್ರಾ ಕೆರೆಮಠ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.