ದಾಸ ಪರಂಪರೆಯಲ್ಲಿ ಬರುವ ಶ್ರೀ ಜಗನ್ನಾಥ ದಾಸರ ಬಗ್ಗೆ ಅನೇಕರಿಗೆ ಗೊತ್ತಿರಬಹುದು. “ಹರಿಕಥಾಮೃತಸಾರ’ ಎಂಬ ಮೇರು ಕೃತಿಯನ್ನು ಜಗತ್ತಿಗೆ ನೀಡಿದ, ಈ ದಾಸಶ್ರೇಷ್ಠರ ಜೀವನ ಚರಿತ್ರೆಯನ್ನು ಕುರಿತು ಕನ್ನಡದಲ್ಲಿ “ಶ್ರೀಜಗನ್ನಾಥ ದಾಸರು’ ಎನ್ನುವ ಹೆಸರಿನಲ್ಲಿ ಸಿನಿಮಾ ಸಿದ್ಧವಾಗಿದ್ದು, ಬಿಡುಗಡೆಗೆ ತಯಾರಾಗುತ್ತಿದೆ.
ಕಳೆದ ಕೆಲ ದಿನಗಳಿಂದ “ಶ್ರೀಜಗನ್ನಾಥ ದಾಸರು’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿ ರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಹೊರ ತಂದಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು “ಶ್ರೀಜಗನ್ನಾಥ ದಾಸರು’ ಚಿತ್ರದ ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಿ ಆಶೀರ್ವದಿಸಿದರು.
ಹಿರಿಯ ನಿರ್ದೇಶಕ ಭಗವಾನ್, ತೇಜಸ್ವಿನಿ ಅನಂತ ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಭಾ.ಮ.ಹರೀಶ್ ಮೊದಲಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಇದನ್ನೂ ಓದಿ:ಬಿಗ್ ಬಾಸ್ : ಪ್ರಶಾಂತ್ ಸಂಬರಗಿ- ವೈಷ್ಣವಿ ಗೌಡ ಔಟ್ : ಇರುವ ಮೂವರಲ್ಲಿ ಗೆಲ್ಲೋರ್‍ಯಾರು..?
ಇದೇ ವೇಳೆ ಮಾತನಾಡಿದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, “ಪರಿಶುದ್ಧವಾದ ಭಕ್ತಿ ಮನುಷ್ಯ ಮತ್ತು ದೇವರ ನಡುವೆ ಕೊಂಡಿಯಂತಿರುತ್ತದೆ. ಪರಿಶುದ್ಧ ಭಕ್ತಿಯನ್ನು ದೇವರ ಬಳಿ ನಿವೇದಿಸುವುದು ಹೇಗೆ ಎಂಬುದನ್ನು ನಮಗೆ ದಾಸಶ್ರೇಷ್ಠರಾದ ಜಗನ್ನಾಥದಾಸರು ತಮ್ಮ ಕೃತಿಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅಂತಹ ದಾಸರ ಜೀವನ ಚರಿತ್ರೆ ಚಲನಚಿತ್ರ ರೂಪದಲ್ಲಿ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಚಿತ್ರ ಮೂಡಿಬರಲು ಶ್ರಮಿಸಿದ ಎಲ್ಲರಿಗೂ ದಾಸರ ಮೂಲಕ ದೈವಾನುಗ್ರಹವಾಗಲಿ’ ಎಂದು ಹರಸಿದರು.
ಇನ್ನು ಶ್ರೀಜಗನ್ನಾಥ ದಾಸರು’ ಚಿತ್ರದಲ್ಲಿ ಹೈದರಾಬಾದ್ ಮೂಲದ ಶರತ್ ಜೋಷಿ ಜಗನ್ನಾಥದಾಸರ ಪಾತ್ರದಲ್ಲಿ ಮತ್ತು ತ್ರಿವಿಕ್ರಮ ಜೋಷಿ ವಿಜಯದಾಸರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಳಿದಂತೆ ಪ್ರಭಂಜನ ದೇಶಪಾಂಡೆ, ಸುರೇಶ್ ಕಾಣೇಕರ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಿಜಯ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.
ಮಧುಸೂದನ್ ಹವಾಲ್ದಾರ್ “ಶ್ರೀಜಗನ್ನಾಥ ದಾಸರು’ ಚಿತ್ರವನ್ನು ನಿರ್ಮಿಸಿ, ನಿರ್ದೇಶಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಮಧುಸೂದನ್ ಹವಾಲ್ದಾರ್, “ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ’ ಎಂದರು.