ಬಳ್ಳಾರಿ : ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಇದು ಕಾರ್ಯಕರ್ತರ ಚುನಾವಣೆ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಕೌಲ್‌ಬಜಾರ್ ಪ್ರದೇಶದ ಬಂಡಿಹಟ್ಟಿ, ರಾಮಾಂಜಿನೇಯ ನಗರ, ವಟ್ಟಪ್ಪಗೇರಿ ಸೇರಿ ಹಲವೆಡೆ ಭಾನುವಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಕಾರ್ಯಕರ್ತರ ಒಗ್ಗಟ್ಟು ಮುಖ್ಯ. ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ ಶ್ರಮಿಸಿದಲ್ಲಿ ಪಕ್ಷದ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಬಹುದು ಎಂದವರು ತಿಳಿಸಿದರು.
ನಮಗೆಲ್ಲ ಮುಂದಿನ ಚುನಾವಣೆಗಳಿಗೆ ಪಾಲಿಕೆಯೇ ಬುನಾದಿ. ಕಾರ್ಯಕರ್ತರೇ ಇಲ್ಲಿ ಸ್ಪ ರ್ಧಿಗಳಾಗಿರುವುದರಿಂದ ನಿಮ್ಮ ಗೆಲುವಿಗೆ ನಮ್ಮ ಎಲ್ಲ ಶ್ರಮ ಹಾಕುತ್ತೇವೆ. ಟಿಕೆಟ್ ಒಬ್ಬರಿಗೇ ನೀಡುವುದರಿಂದ ಇತರರು ಬೇಸರಗೊಳ್ಳದೆ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುಂದಾಗಬೇಕು ಎಂದರು.ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಮಾತನಾಡಿ, ಮುಖ್ಯವಾಗಿ ಮತದಾನ ಮಾಡಲು ಮತದಾರರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಇಲ್ಲಿನ ಪಾಲಿಕೆಯಲ್ಲಿ ಬಿಜೆಪಿ ಅಕಾರಕ್ಕೆ ಬಂದರೆ ನಗರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಸಿಗಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮತ್ತೂಮ್ಮೆ ಮಾಡದೆ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಪಣ ತೊಡಬೇಕು ಎಂದು ಕಾರ್ಯಕರ್ತರಲ್ಲಿ ಕೋರಿದರು. ಇದೇ ವೇಳೆ ಮಾಜಿ ಸಂಸದೆ ಜೆ. ಶಾಂತಾ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸನಗೌಡ, ಮುಖಂಡರಾದ ಎ.ಎಂ. ಸಂಜಯ್, ಗೋವಿಂದರಾಜುಲು, ಗೌಳಿ ಶಂಕ್ರಪ್ಪ, ಶಶಿಕಲಾ, ನೂರ್, ಡಿ. ವಿನೋದ್, ಹೊನ್ನೂರುಸ್ವಾಮಿ, ವೆಂಕಟೇಶ್, ಸಂಜಯ್ ಬೆಟಗೇರಿ ಸೇರಿ ಹಲವರು ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದರ ಕುರಿತು ಕಾರ್ಯಕರ್ತರು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು.