Advertisement

ರಂಗಭೂಮಿ ಇತಿಹಾಸದಲ್ಲಿ ಸುಭದ್ರಮ್ಮ ದಂತಕತೆ: ಕಲ್ಮಠ

10:34 AM Jul 17, 2020 | Suhan S |

ಬಳ್ಳಾರಿ: ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಾಡೋಜ ಡಾ| ಸುಭದ್ರಮ್ಮ ಮನ್ಸೂರ್‌ ಅವರು ತಮ್ಮ ಪಾತ್ರಾಭಿನಯದ ಮೂಲಕ ರಂಗಭೂಮಿಯಲ್ಲಿ ಮಿನುಗಿ ಮರೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ರಂಗಭೂಮಿ ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರ್‌ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಗುಣಗಾನ ಮಾಡಿದರು. ರಕ್ತರಾತ್ರಿ ನಾಟಕದ ಅವರ ದ್ರೌಪದಿ ಪಾತ್ರ ಮತ್ತು ಹೇಮರೆಡ್ಡಿ ಮಲ್ಲಮ್ಮನ ಪಾತ್ರ ಅವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟವು. ಅಸಂಖ್ಯ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಸುಭದ್ರಮ್ಮ ಅವರು, ಹಳ್ಳಿಹಳ್ಳಿಗೂ ಪರಿಚಿತರಾಗಿ, ಕನ್ನಡಿಗರ ಪ್ರೀತಿಗೆ ಪಾತ್ರರಾಗಿ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ದಂತಕತೆಯಾಗಿದ್ದಾರೆ ಎಂದು ಗುಣಗಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್‌ ಕೆ. ರಂಗಣ್ಣನವರ್‌ ಅವರು ಮಾತನಾಡಿ, ಸುಭದ್ರಮ್ಮ ಮನ್ಸೂರ್‌ ಅವರ ನಿಧನ ವಾರ್ತೆ ಕೇಳಿ ದಿಗ್ಭ್ರಮೆಯಾಯಿತು. ರಾಜ್ಯದಲ್ಲಿ ರಂಗಕಲೆಗೆ ಮೆರಗು ತಂದುಕೊಟ್ಟ ಹಿರಿಯ ಕಲಾವಿದೆಯ ಕೊಂಡಿ ಕಳಚಿತು ಎಂದು ನುಡಿದರು.

ಹಿರಿಯ ರಂಗಕಲಾವಿದರಾದ ರಮೇಶ್‌ಗೌಡ ಪಾಟೀಲ್‌, ಗೆಣಿಕೆಹಾಳ್‌ ತಿಮ್ಮನಗೌಡ, ವೀಣಾ ಆದವಾನಿ, ಕೆ.ಜಗದೀಶ್‌, ಪುರುಷೋತ್ತಮ ಹಂದ್ಯಾಳ್‌, ಸಾಹಿತಿ ಎನ್‌.ಡಿ. ವೆಂಕಮ್ಮ, ಎನ್‌. ಬಸವರಾಜ್‌, ಸಿ.ಎಂ.ಮಂಜುನಾಥ್‌, ಎಚ್‌.ಎಂ.ಪಾರ್ವತೀಶ್‌, ಎಚ್‌.ಎಂ.ಅಮರೇಶ್‌, ಬಸವರಾಜ ನಾಡಂಗ, ಡಾ| ಕೆ.ಬಸಪ್ಪ, ಕೆ.ಎಂ.ಷಣ್ಮುಖಯ್ಯ, ವೀರೇಶ್‌ ಕರಡಕಲ್‌, ಟಿ.ಎಂ.ಪಂಪಾಪತಿ, ಬಲಗುಡ್ಡ ವೀರನಗೌಡ, ಸಿದ್ಮಲ್‌ ಮಂಜುನಾಥ ಇದ್ದರು. ಆರಂಭದಲ್ಲಿ ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next