ಚಿಕ್ಕಬಳ್ಳಾಪುರ: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣಹಾನಿಯಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಫ್ರಿಜ್‌ನಲ್ಲಿಟ್ಟಿರುವ ನೀರು, ಐಸ್‌ಕ್ರೀಮ್ ಹಾಗೂ ತಂಪು ಪಾನೀಯಗಳನ್ನು ಸೇವಿಸಬಾರದು ಎಂದು ನಿಡುಮಾಮಿಡಿ ಮಠಕ್ಕೆ ಸೇರಿದ ಶ್ರೀ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯ ಹೊರಡಿಸಿರುವ ಸುತ್ತೋಲೆಯೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬಿಸಿಲಿನ ತಾಪಮಾನದ ಬಗ್ಗೆ ವಿದ್ಯಾರ್ಥಿಗಳು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಆರೋಗ್ಯ ಇಲಾಖೆಯನ್ನು ಉಲ್ಲೇಖೀಸಿ ಈ ಸುತ್ತೋಲೆ ಹೊರಡಿಸಿದ್ದು, ಆರೋಗ್ಯ ಇಲಾಖೆಯು ಕಾಲೇಜಿಗೆ ನೋಟಿಸ್ ನೀಡಿದೆ.
ವಾಪಸಂದ್ರದಲ್ಲಿರುವ ಶ್ರೀ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲರು ಮುಖ್ಯ ಸೂಚನೆ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗೆ ಬರೆದಿರುವ ಹಲವು ಅಂಶಗಳವುಳ್ಳ ಪತ್ರ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.