Advertisement

ತ್ರಿವಳಿ ಮಹಿಳೆಯರಿಂದಾಯ್ತು ಶೌಚಮುಕ್ತ ಮೇದಿನಿ ಗ್ರಾಮ

02:45 AM Jul 14, 2017 | Team Udayavani |

ಮೈಸೂರು: ಇನ್ನೇನು ಕೆಲಸ ಇಲ್ವಾ ನಿಮ್ಗೆ, ಹಳ್ಳಿಗ್ಯಾಕೆ ಕಕ್ಕಸ್ಸು ಗುಂಡಿ ಎಂದು ಅಧಿಕಾರಿಗಳನ್ನೇ ಹೀಯಾಳಿಸಿದ ಗ್ರಾಮಸ್ಥರೀಗ ಒಂದೇ ದಿನ 170 ಶೌಚಾಲಯ ನಿರ್ಮಿಸಿ, ಇದೀಗ ತಮ್ಮ ಗ್ರಾಮವನ್ನು ಶೌಚಮುಕ್ತ ಮಾಡಿ ರಾಜ್ಯಕ್ಕೆ
ಮಾದರಿಯಾಗಿ ಹೊರಹೊಮ್ಮಿದ್ದಾರೆ. ಹೀಗೆ ಗ್ರಾಮದ ವಸ್ತುಸ್ಥಿತಿಯೇ ಬದಲಾಗಲು ಕಾರಣರಾಗಿದ್ದು ಮಾತ್ರ ಆ ಮೂವರು ಮಹಿಳಾ ಅಧಿಕಾರಿಗಳು, ಆ ಗ್ರಾಮದ ಮಹಿಳೆಯರು ಶೌಚಕ್ಕೆ ಹೋಗಲು ಸೂರ್ಯ ಮೂಡುವ ಮುಂಚೆ ಅಥವಾ ಸೂರ್ಯ ಮುಳುಗಿದ ನಂತರ ಹೊಲಗಳ ಬೇಲಿ, ಪೊದೆಗಳನ್ನು ಹುಡುಕಿಕೊಂಡು ಹೋಗಿ ನಿತ್ಯಕರ್ಮ ಮುಗಿಸಿ
ಬರಬೇಕಾದ ದಯನೀಯ ಸ್ಥಿತಿ ಇತ್ತು.

Advertisement

ಇದ್ಯಾವುದೋ ದೂರದ ಕಾಡಂಚಿನ ಗ್ರಾಮವೊಂದರ ದುಸ್ಥಿತಿಯಲ್ಲ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹೊಳೆಸಾಲು ಗ್ರಾಪಂ ವ್ಯಾಪ್ತಿಯ ಮೇದಿನಿ ಗ್ರಾಮದಲ್ಲಿ ನಿತ್ಯ ಕಂಡು ಬರುತ್ತಿದ್ದ ಚಿತ್ರಣವದು. ಒಟ್ಟು 456 ಕುಟುಂಬಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಪರಿಶಿಷ್ಟರ ಕುಟುಂಬಗಳೇ ಹೆಚ್ಚು. ಪರಿಶಿಷ್ಟ ವರ್ಗಗಳ 337, ಪರಿಶಿಷ್ಟ ಜಾತಿಯ 31 ಸೇರಿ ಒಟ್ಟಾರೆ 368 ಪರಿಶಿಷ್ಟ ಕುಟುಂಬಗಳಿವೆ.

170 ಮನೆಯಲ್ಲಿರಲಿಲ್ಲ ಶೌಚಾಲಯ:
ಗ್ರಾಮದ 456 ಕುಟುಂಬಗಳ ಪೈಕಿ ಅನುಕೂಲ ಸ್ಥರಾದ 147 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದರೆ, ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾಗಿರುವ 139 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿದ್ದವು, ಇನ್ನುಳಿದ 170 ಮನೆಗಳಲ್ಲಿ ಶೌಚಾಲಯವಿರಲಿಲ್ಲ. ಸ್ವತ್ಛಭಾರತ್‌ ಮಿಷನ್‌ ಯೋಜನೆಯಡಿ ಬಯಲು ಶೌಚಮುಕ್ತಗೊಳಿಸುವ ಜಿಪಂ ಕಾರ್ಯಕ್ರಮದಂತೆ ಗ್ರಾಮವನ್ನು ಸಂಪೂರ್ಣ ಬಯಲು ಶೌಚ ಮುಕ್ತಗೊಳಿಸಲು
ಮುಂದಾದಾಗ ಆರಂಭದಲ್ಲಿ ಗ್ರಾಮಸ್ಥರು ಮುಂದೆ ಬಂದಿರಲಿಲ್ಲ. ತಾಪಂ ಸಂಜೀವಿನಿ ಒಕ್ಕೂಟದ ಎನ್‌ಆರ್‌ಎಲ್‌ಎಂನಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ಶಶಿಕಲಾ ಎಸ್‌., ಸೌಮ್ಯ ಹಾಗೂ ರೋಹಿಣಿ ಅವರಿಗೆ ತಾಪಂ ವತಿಯಿಂದ ಹೊಳೆಸಾಲು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಶೌಚಾಲಯದ ಸಮೀಕ್ಷೆ ಕೆಲಸ ವಹಿಸಲಾಯಿತು.

ಸೊಪ್ಪು ಹಾಕದ ಗ್ರಾಮಸ್ಥರು: ಕಳೆದ ಆರು ತಿಂಗಳ ಹಿಂದೆ ಮೇದಿನಿ ಗ್ರಾಮದಲ್ಲಿ ಈ ಮೂವರು ಮಹಿಳೆಯರು ಸಮೀಕ್ಷೆ ಮಾಡಿದಾಗ 172 ಮನೆಗಳು ಶೌಚಾಲಯ ಹೊಂದಿಲ್ಲದಿರುವುದು ಕಂಡುಬಂತು. ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ತಿಳಿ ಹೇಳಿದರೂ ಗ್ರಾಮದ ಪುರುಷರು ಇವರ ಮಾತಿಗೆ ಸೊಪ್ಪು ಹಾಕಲಿಲ್ಲ. ಕಡೆಗೆ ಗ್ರಾಮದ ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಸಭೆಗಳಲ್ಲಿ ಶೌಚಕ್ಕೆ ಹೋಗುವಾಗ ಮಹಿಳೆಯರು ಯಾವ ರೀತಿಯ ಸಮಸ್ಯೆಗಳನ್ನು
ಎದುರಿಸಬೇಕೆಂಬ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟ ನಂತರ ಎರಡು ಕುಟುಂಬದವರು ಶೌಚಾಲಯ ನಿರ್ಮಿಸಿಕೊಂಡಿದ್ದರು.

ಒಂದೇ ದಿನಕ್ಕೆ ಶೌಚ ಮುಕ್ತ: ಗಾಂಧಿಜಯಂತಿ ವೇಳೆಗೆ ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸಬೇಕೆಂಬ ಜಿಪಂ ಆಡಳಿತದ ಪ್ರಯತ್ನದ ಫ‌ಲವಾಗಿ ಸಣ್ಣ ಗ್ರಾಮವಾದ ಮೇದಿನಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ಫ‌ಲ ನೀಡಿದ್ದು, ಬುಧವಾರ ಒಂದೇ ದಿನದಲ್ಲಿ 170 ಶೌಚಾಲಯಗಳನ್ನು ಕಟ್ಟಿಸುವ ಮೂಲಕ ಈಗ ಮೇದಿನಿ ಗ್ರಾಮ ಸಂಪೂರ್ಣ ಬಯಲು ಶೌಚ ಮುಕ್ತವಾಗಿದೆ. ಸುಮಾರು 40 ಜನ ಗಾರೆ ಕೆಲಸಗಾರರ ಜತೆಗೆ ಗ್ರಾಮಸ್ಥರೂ ಕೈಜೋಡಿಸಿದ್ದರಿಂದ, ಒಂದೇ ದಿನದಲ್ಲಿ 170 ಶೌಚಾಲಯ ನಿರ್ಮಾಣ ಕಾರ್ಯ ಸಾಧ್ಯವಾಗಿದೆ.

Advertisement

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next