Advertisement

ಶೂಟಿಂಗ್‌ಗೆ ಘೋಷಣಾ ಪತ್ರ ಬೇಕು

06:13 AM Jun 21, 2020 | Lakshmi GovindaRaj |

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಅರ್ಧಕ್ಕೆ ನಿಂತಿದ್ದ ಸಿನಿಮಾ, ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ ರಾಜ್ಯ ಸರ್ಕಾರ ಈಗ ಚಿತ್ರೀಕರಣದ ಕುರಿತಂತೆ ಒಂದಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ದೈಹಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್‌ ಬಳ ಕೆಯ ಜೊತೆಗೆ ಇನ್ನೂ ಹಲವು ಮಾರ್ಗ ಸೂಚಿಗಳನ್ನು ನೀಡಲಾಗಿದೆ.

Advertisement

ಚಿತ್ರೀಕರಣಕ್ಕೆ ಬರುವವರನ್ನು ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆ ಜತೆಗೆ ಸಿನಿಮಾದ ನಿರ್ಮಾಪಕರು, ಚಿತ್ರೀಕರಣಕ್ಕೆ ಬರುವವರ ಆರೋಗ್ಯದ ಕುರಿತಾಗಿ ಪ್ರತಿದಿನ ಸ್ವಯಂಘೋಷಣಾ ಪತ್ರ ಪಡೆಯಬೇಕು. ಹತ್ತು ವರ್ಷಕ್ಕಿಂತ ಕಡಿಮೆ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ವೈದ್ಯಕೀಯ ಪ್ರಮಾಣ ಪತ್ರ ಹೊರತು ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದೆ. ನಿರ್ಮಾಣ ಸಂಸ್ಥೆಗಳು ಚಿತ್ರೀಕರಣಕ್ಕೆ 50ಕ್ಕಿಂತಲೂ ಕಡಿಮೆ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು.

ಪಾತ್ರವರ್ಗವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಯ್ಕೆ ಮಾಡಿಕೊಳ್ಳಬೇಕು, ಸಾಧ್ಯವಾದಷ್ಟು ಸೆಟ್‌ ಗಳಲ್ಲಿ  ಚಿತ್ರೀಕರಣ ಮಾಡಿ, ಹೊರಾಂಗಣ ಚಿತ್ರೀಕರಣವನ್ನು ಕಡಿತಗೊಳಿಸಬೇಕು. ಕಂಟೈನ್ಮೆಂಟ್‌ ವಲಯಗಳಿಂದ ಬರುವ ಸಿಬ್ಬಂದಿಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ. ಕಲಾವಿದರು ಸಾಧ್ಯವಾದಷ್ಟು ಅವರ ಮನೆಗಳಲ್ಲೇ ಸಿದ್ಧರಾಗಿ, ಕನಿಷ್ಠ ಸಿಬ್ಬಂದಿಯೊಂದಿಗೆ ಬರಬೇಕು, ಮೇಕಪ್‌ ಹಾಗೂ ಕೇಶಾಲಂಕಾರ ಒಬ್ಬರೇ ನಿರ್ವಹಿಸಲು ಪ್ರಯತ್ನಿಸಬೇಕು.

ಆಹಾರ ಸರಬರಾಜಿನಲ್ಲಿ ಶುಚಿತ್ವ ಕಾಪಾಡಬೇಕು, ಕಲಾ ವಿಭಾಗದಲ್ಲಿ ಬಳಸುವ ವಸ್ತುಗಳನ್ನು ಮೊದಲು ಹಾಗೂ ಆ ನಂತರ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕೆಂದು ಸೂಚಿಸಿದೆ. ಈ ಕುರಿತು ಮಾತನಾಡುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ನಿಧಾನವಾಗಿ ಚಿತ್ರರಂಗದ ಚಟುವಟಿಕೆಗಳು ಪ್ರಾರಂಭ ವಾಗುತ್ತಿದೆ.  ಎಲ್ಲರೂ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕಿದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next