Advertisement
ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇಂತಹದೊಂದು ಜಾಲವನ್ನು ಭೇದಿಸಿ, ವೈದ್ಯರೂ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಇದರಿಂದ ಕಳೆದ 3 ವರ್ಷಗಳಲ್ಲಿ ಈ ತಂಡವು 900 ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ.
ಮನೆ ತುಂಬ ಮಕ್ಕಳಿರುತ್ತಿದ್ದ ಕಾಲವೊಂದಿತ್ತು. ಹೆಣ್ಣು ಮಕ್ಕಳ ಜನನದ ಬಗ್ಗೆ ತಪ್ಪು ಕಲ್ಪನೆಗಳಿದ್ದದ್ದೂ ನಿಜ. ಗಂಡು ಹುಟ್ಟಿದರಷ್ಟೇ ಮುಕ್ತಿ ಎನ್ನುವ ಮೌಡ್ಯದಿಂದಾಗಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿತ್ತು. ಈಗೀಗ ಆರುತಿಗೊಂದು, ಕೀರುತಿಗೊಂದು ಎನ್ನುವ ಕಾಲವೂ ಹೋಗಿ, ಹೆಣ್ಣಿರಲಿ, ಗಂಡಿರಲಿ – ಮನೆಗೊಂದು ಮಗುವಿರಲಿ ಎನ್ನುವ ಕಾಲ ಬಂದಿದೆ. ಮಕ್ಕಳಾದರೆ ಸಾಕು ಎಂದು ಹಂಬಲಿಸುವ ಎಷ್ಟೋ ದಂಪತಿಗಳಿದ್ದಾರೆ. ಹೀಗಿದ್ದೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂದರೆ, ಇದಕ್ಕೆ ಕಾರಣಗಳೇನು? ಇವುಗಳನ್ನು ತಡೆಯಲು ಏನು ಕ್ರಮ ವಹಿಸಬೇಕು ಎಂಬುದನ್ನು ಸರಕಾರ ಗಂಭೀರವಾಗಿ ಪರಾಮರ್ಶಿಸಬೇಕಿದೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾನೂನು, ಗೃಹ ಹಾಗೂ ಆರೋಗ್ಯ ಇಲಾಖೆಗಳು ಹೆಚ್ಚು ಗಮನ ಹರಿಸಬೇಕಿದೆ. ಒಟ್ಟಾಗಿ ಕೆಲಸ ಮಾಡಬೇಕಿದೆ.
Related Articles
Advertisement
ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಮಾಡುವುದಕ್ಕೆ ಕಾನೂನಿನಲ್ಲಿ ಸಾಕಷ್ಟು ಪರಿಮಿತಿಗಳನ್ನು ವಿಧಿಸಿದೆ. ಆಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮೂಲಕ ಲಿಂಗಪತ್ತೆ ಮಾಡುವುದಕ್ಕೆ ನಿಷೇಧವಿದೆ. ಭ್ರೂಣದ ಆರೋಗ್ಯ ಸ್ಥಿತಿ ಅರಿಯಲಷ್ಟೇ ಬಳಸಲು ಅನುಮತಿಸಲಾಗಿದೆ. ಇದನ್ನರಿತ ವೈದ್ಯರು ಪೋರ್ಟೆಬಲ್ ಸ್ಕ್ಯಾನರ್‌ಗಳನ್ನು ಆಲೆಮನೆ ಮತ್ತಿತರೆಡೆ ಬಳಸಿ ಲಿಂಗಪತ್ತೆ ಮಾಡುತ್ತಾರೆಂದರೆ ಕಾನೂನಿನ ಭಯ ಇಲ್ಲ ಎಂದೇ ಅರ್ಥ. ಸರಕಾರ, ಕಾನೂನುಗಳು ಚಾಪೆ ಕೆಳಗೆ ತೂರಿದರೆ, ಪಾತಕಿಗಳು ರಂಗೋಲಿ ಕೆಳಗೇ ತೂರುತ್ತಾರೆ. ಈ ಬಗ್ಗೆ ಸರಕಾರ ಮತ್ತಷ್ಟು ಕಠಿನವಾಗಲೇಬೇಕಿದೆ. ಕಾನೂನು ಕಟ್ಟುನಿಟ್ಟಾಗುವುದು ಒಂದೆಡೆಯಾದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತವೂ ದೃಷ್ಟಿ ಹಾಯಿಸಬೇಕು.