ನವದೆಹಲಿ: 12 ವರ್ಷದ ಅಪ್ರಾಪ್ತ ವಯಸ್ಕ ಬಾಲಕನೊಬ್ಬನ ಮೇಲೆ ನಾಲ್ವರು ಲೈಂಗಿಕ ದೌರ್ಜನ್ಯವೆಸಗಿ ವಿಕೃತಿ ಮೆರೆದ ಹೇಯ ಕೃತ್ಯ ದಿಲ್ಲಿಯಲ್ಲಿ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ ಈ ಘಟನೆ ಸೆ.18 ರಂದು ದಿಲ್ಲಿಯ ಸೀಲಂಪುರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ನೋವಿನಲ್ಲಿ ಬಳಲುತ್ತಿದ್ದ ಬಾಲಕ ಘಟನೆಯ ಬಗ್ಗೆ ಸೆ. 22 ರಂದು ಪೋಷಕರ ಬಳಿ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.
ಬಾಲಕನ ಖಾಸಗಿ ಅಂಗಕ್ಕೆ ಕೋಲುಗಳಿಂದ ಹೊಡೆದು ಲೈಂಗಿಕವಾಗಿ ದೌರ್ಜನ್ಯವೆಸಗಿ, ಬಾಲಕನನ್ನು ಗಂಭೀರ ಗಾಯಗೊಳಿಸಿ ಅರೆ ಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ಬಾಲಕ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿ ,ದಿಲ್ಲಿಯಲ್ಲಿ ಹುಡುಗರು ಕೂಡ ಸುರಕ್ಷಿತರಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರ ಕೂಡ ಸುರಕ್ಷಿತರಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಬಾಲಕನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಅರೆ ಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ನಮ್ಮ ತಂಡ ಈ ಘಟನೆ ಸಂಬಂಧ ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಒಬ್ಬನನ್ನು ಬಂಧಿಸಿದ್ದಾರೆ. ಇನ್ನು ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಸಮಿತಿ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.