Advertisement

ಹಳ್ಳಿಯಿಂದ ದಿಲ್ಲಿ ದರ್ಬಾರ್‌ ಪ್ರವೇಶಿಸಿದ ಶೋಭಾ: ಕೇಂದ್ರ ಸಚಿವೆ ಕರಂದ್ಲಾಜೆ ರಾಜಕೀಯ ಪಯಣ

03:17 AM Jul 08, 2021 | Team Udayavani |

ಉಡುಪಿ : ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಜನಿಸಿ,ಉಡುಪಿ -ಮಣಿಪಾಲದಲ್ಲಿ ವಿಕಾಸ ಹೊಂದಿದ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರ ಸಚಿವ ಸ್ಥಾನ ಲಭಿಸಿದೆ.

Advertisement

1966ರ ಅ. 23ರಂದು ಮೋನಪ್ಪ ಗೌಡ ಮತ್ತು ಪೂವಕ್ಕ ದಂಪತಿಯ ಮಗಳಾಗಿ ಜನಿಸಿದ ಶೋಭಾ, ಪುತ್ತೂರಿನಲ್ಲಿ ಪದವಿ, ಮಂಗಳೂರು ವಿ.ವಿ.ಯಲ್ಲಿ ಸಮಾಜ ಸೇವೆ ಮತ್ತು ಮೈಸೂರು ವಿ.ವಿ.ಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರು ಮತ್ತು ಮಣಿಪಾಲದಲ್ಲಿ ಉದ್ಯೋಗ ಮಾಡಿ, ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯ ದರ್ಶಿಯಾಗಿ(1996) ರಾಜಕೀಯ ಜೀವನ ಆರಂಭಿಸಿದರು.

ಆರೆಸ್ಸೆಸ್‌ ಮಹಿಳಾ ವಿಭಾಗದ ರಾಷ್ಟ್ರ ಸೇವಿಕಾ ಸಮಿತಿ, ಎಬಿವಿಪಿ, ಭಾರತೀಯ ಕಿಸಾನ್‌ ಸಂಘ, ವಿಶ್ವ ಹಿಂದೂ ಪರಿಷತ್‌ ಹೀಗೆ ಹಲವು ಸಂಘ ಪರಿವಾರದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಕೊಜೆಂಟ್ರಿಕ್ಸ್‌ ವಿರುದ್ಧ ಹೋರಾಟ, ಕುಮಾರಧಾರ ನದಿ ಉಳಿವಿಗಾಗಿ, ಪಶ್ಚಿಮ ಘಟ್ಟಗಳ ಉಳಿವಿನ ಹೋರಾಟದಲ್ಲಿದ್ದರು.

ತ್ಸುನಾಮಿ ಸಂಭವಿಸಿದಾಗ ನಾಗಪಟ್ಟಣಂನಲ್ಲಿ ಜನರ ಸೇವೆ, ಶಬರಿ ಮಲೆಯಲ್ಲಿ 2010ರಲ್ಲಿ ಉಂಟಾದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ, ಗಾಯಗೊಂಡ ಜನರಿರುವ ಪ್ರದೇಶಕ್ಕೆ ಹೋಗಿ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಯತ್ನಿಸಿದರು. ಮೈಸೂರಿನ ಉಸ್ತುವಾರಿ ಸಚಿವೆಯಾಗಿ ದಸರಾ ಹಬ್ಬವನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸಿದರು.

ಪಂ.ರಾಜ್‌ ಇಲಾಖೆ ನಂ. 1
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವೆಯಾಗಿ (2008-13) ಗ್ರಾಮೀಣಾಭಿವೃದ್ಧಿಯಲ್ಲಿ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆಯಾಗಿ (2010-12) 35 ಲಕ್ಷಕ್ಕಿಂತಲೂ ಹೆಚ್ಚು ನಕಲಿ ಪಡಿತರ ಚೀಟಿ ಮತ್ತು ನಕಲಿ ಗ್ಯಾಸ್‌ ಸಂಪರ್ಕಗಳನ್ನು ಪತ್ತೆ ಹಚ್ಚಿದ್ದರು.

Advertisement

2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಸಂಸದರಾದರು. ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣಕ್ಕೆ ಗಮನ, ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲೇ ಮೊದಲ ಸ್ಥಾನಕ್ಕೇರಿಸಿದರು. ಇನ್ನಂಜೆ ರೈಲ್ವೇ ನಿಲ್ದಾಣದ ಉನ್ನತೀಕರಣ, , ಉಡುಪಿ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್‌ ಸೌಲಭ್ಯ, ಕೊಂಕಣ ರೈಲ್ವೇ ಮಾರ್ಗದ ಹಳಿಗಳ ದ್ವಿಪಥೀಕರಣ ಕಾಮಗಾರಿ, ವಿವಿಧ ಕೇಂದ್ರ ಯೋಜನೆಗಳ ಜಾರಿಗೆ ಶ್ರಮಿಸಿದ್ದಾರೆ.

ಉಡುಪಿಗೆ ಸಖೀ ಒನ್‌ ಸ್ಟಾಪ್‌ ಸೆಂಟರ್‌. ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್‌ ಕೇಂದ್ರ, ಉಪ್ಪೂರಿನಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಇವರ ಅವಧಿಯಲ್ಲಿ ದೊರೆತಿದೆ. ಸಂಸದೀಯ ಕಲಾಪದಲ್ಲೂ ಸಕ್ರಿಯರಾಗಿದ್ದಾರೆ.

ಆಗ ರಾಜ್ಯ ಸಚಿವೆ, ಈಗ ಕೇಂದ್ರ ಸಚಿವೆ
2004ರಲ್ಲಿ ವಿಧಾನ ಪರಿಷತ್ತಿಗೆ, 2008ರಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾದರು. 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮಹಿಳಾ ಸಬಲೀಕರಣ ಸಮಿತಿ, ರಕ್ಷಣಾ ಸ್ಥಾಯೀ ಸಮಿತಿ, ಕೃಷಿ ಸಚಿವಾಲಯ ಸಲಹಾ ಸಮಿತಿ ಸದಸ್ಯೆಯಾದರು. 2019ರಲ್ಲಿ ಇದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಈಗ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜಾತಿ, ರಾಜಕೀಯ ಲೆಕ್ಕಾಚಾರದಲ್ಲಿ ಟಾಸ್‌
ಉಡುಪಿ : ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಸಚಿವರಾಗಿ ಆಯ್ಕೆಯಾದದ್ದರ ಹಿಂದಿನ ಲೆಕ್ಕಾಚಾರದ ಬಗ್ಗೆ ಚರ್ಚೆ ಆರಂಭವಾಗಿದೆ. ಕೇಂದ್ರದಲ್ಲಿ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡರ ಸ್ಥಾನಕ್ಕೇ ಡಿವಿಯವರ ಸಮುದಾಯಕ್ಕೇ ಸೇರಿದ ಶೋಭಾ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಬಿಜೆಪಿಗೆ ಅತಿ ಹೆಚ್ಚು ಸಾಂಖೀಕ ಶಕ್ತಿ ತುಂಬಿದ ಕರಾವಳಿ ಭಾಗಕ್ಕೆ ಪ್ರಾತಿನಿಧ್ಯ ನೀಡುವ ತಂತ್ರಗಾರಿಕೆಯೂ ಇದೆ. ಮಹಿಳಾ ಕೋಟಾದಡಿಯೂ ಶೋಭಾ ಟಾಸ್‌ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಒಕ್ಕಲಿಗರ ಮತ್ತು ಮಹಿಳೆಯರ ಮತ ಸೆಳೆಯುವ ತಂತ್ರವೂ ಇದೆ ಎನ್ನಲಾಗುತ್ತಿದೆ.

ಸದ್ಯ ಸ್ವಕ್ಷೇತ್ರ ಭೇಟಿ ಅನುಮಾನ
ಉಡುಪಿ: ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶೋಭಾ ಕರಂದ್ಲಾಜೆ ಯವರು ಸದ್ಯ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆಗಳಿಲ್ಲ.

ಜು. 19ರಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಅಷ್ಟರೊಳಗೆ ಉಡುಪಿಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ತರಾತುರಿಯಲ್ಲಿ ನಡೆದ ಕಾರ್ಯಕ್ರಮವಾದ ಕಾರಣ ಶೋಭಾ ಅವರ ಬಂಧುಗಳು ಪ್ರಮಾಣವಚನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯರು ನನ್ನನ್ನು ಗುರುತಿಸಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರ ಪ್ರೀತಿ, ಆಶೀರ್ವಾದದ ಫ‌ಲ ಇದು.
– ಶೋಭಾ ಕರಂದ್ಲಾಜೆ

Advertisement

Udayavani is now on Telegram. Click here to join our channel and stay updated with the latest news.

Next