Advertisement

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

12:08 AM Apr 11, 2024 | Team Udayavani |

ದೇಶದ ಎಲ್ಲ ರಾಜ್ಯಗಳಲ್ಲಿ ಚುನಾವಣ ಕಾವು ಏರುತ್ತಲೇ ಇದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಪಾಂಡಿಚೇರಿ, ದಾಮನ್‌ ಮತ್ತು ಡಿಯು, ದಾದರ್‌ ಮತ್ತು ನಗರ ಹವೇಲಿ ಹಾಗೂ ಚಂಡೀಗಢದಲ್ಲಿ ಕೂಡ ಚುನಾವಣ ಅಖಾಡ ರಂಗೇರಿದೆ. ಇದರಲ್ಲಿ ಮೂರು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿಯೇ ಎ.19ರಂದು ಚುನಾವಣೆ ನಡೆಯಲಿದೆ. ಈ ಮೊದಲು ಪ್ರಮುಖ ರಾಜ್ಯಗಳ ಪೈಕಿ ಈ ಕೇಂದ್ರಾಡಳಿತ ಪ್ರದೇಶಗಳು ಹೆಚ್ಚು ಸುದ್ದಿ ಆಗುತ್ತಿರಲಿಲ್ಲ. ಏಕೆಂದರೆ ಇಲ್ಲಿ ಕೇವಲ ಒಂದಂಕಿಯ ಲೋಕಸಭಾ ಕ್ಷೇತ್ರಗಳ ಕಾರಣದಿಂದ. ಈ ಹಿಂದೆ ಇಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳೇ ಬಹುತೇಕ ಮೇಲುಗೈ ಸಾಧಿಸುತ್ತಿದ್ದವು. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಒಂದೊಂದು ಸ್ಥಾನಗಳು ಕೂಡ ಪ್ರಮುಖ ವಾಗಿರುವುದರಿಂದ ರಾಷ್ಟ್ರೀಯ ಪಕ್ಷಗಳು ಕೂಡ ಕೆಲವು ವರ್ಷಗಳಿಂದ ಈ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತಿವೆ.

Advertisement

ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಪಾಂಡಿಚೇರಿ ಮತ್ತು ಚಂಡೀಗಢ, ದಾಮನ್‌ ಮತ್ತು ಡಿಯು ಹಾಗೂ ದಾದರ್‌ ಮತ್ತು ನಗರ ಹವೇಲಿ ತಲಾ 1 ಲೋಕಸಭಾ ಕ್ಷೇತ್ರವನ್ನು ಹೊಂದಿವೆ.

ಪುದುಚೇರಿ: ತಮಿಳಿನಾಡಿಗೆ ಅಂಟಿಕೊಂಡಿರುವ ಪುದುಚೇರಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ದಟ್ಟವಾಗಿದೆ. ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 9.7 ಲಕ್ಷ ಮತದಾರರಿದ್ದಾರೆ. ಈ ಪೈಕಿ 5.13 ಲಕ್ಷ ಮಹಿಳಾ ಮತದಾರರಿದ್ದರೆ, 4.59 ಪುರುಷ ಮತದಾರರಿದ್ದಾರೆ. ಇನ್ನೊಂದೆಡೆ, ಕ್ಷೇತ್ರದಲ್ಲಿ ವಣ್ಣಿಯನ್‌ ಜಾತಿಯ ಜನರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಸುಮಾರು 4 ಲಕ್ಷ ಜನರಿರುವ ಇವರೇ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದಾರೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇಂಡಿಯಾ ಒಕ್ಕೂಟದಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ಪಾಲಾಗಿದೆ. ಕ್ಷೇತ್ರದ ಹಾಲಿ ಸಂಸದ ವಿ.ವೈತಿಲಿಂಗಂ ಅವರಿಗೆ ಮತ್ತೂಮ್ಮೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಎಐಡಿಎಂಕೆಯಿಂದ ಜಿ.ತಮಿಳ್ವೆàಂದನ್‌ ಸ್ಪರ್ಧಿಸಿದ್ದಾರೆ. ಎನ್‌ಡಿಎ ಒಕ್ಕೂಟದಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಎ.ನಮಸಿವಾಯಮ್‌ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌: ಅಂಡಮಾನ್‌ ಮತ್ತು ನಿಕೋಬಾರ್‌ ಕ್ಷೇತ್ರದಲ್ಲಿ ಒಟ್ಟು 2.07 ಲಕ್ಷ ಮತದಾರರು ಇದ್ದಾರೆ. ಬುಡಕಟ್ಟು ಜನಾಂಗದವರೇ ಇಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. 2019ರ ಲೋಕಸಭೆಯಲ್ಲಿ ಬಿಜೆಪಿಯ ವಿಶಾಲ್‌ ಜೊಲ್ಲಿ ಅವರ ವಿರುದ್ಧ ಕಾಂಗ್ರೆಸ್‌ನ ಕುಲದೀಪ್‌ ರೈ ಶರ್ಮಾ ಜಯಗಳಿಸಿದರು. ಈ ಬಾರಿ ಶರ್ಮಾ ಅವರನ್ನೇ ಮತ್ತೂಮ್ಮೆ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಇದೇ ವೇಳೆ ಬಿಜೆಪಿಯು ಮೂರು ಬಾರಿಯ ಸಂಸದ, ಹಿರಿಯ ನಾಯಕ ಬಿಷ್ಣು ಪದ ರೇ ಅವರಿಗೆ ಟಿಕೆಟ್‌ ನೀಡಿದೆ. ಸಿಪಿಎಂನಿಂದ ಡಿ.ಅಯ್ಯಪ್ಪನ್‌ ಅವರು ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಇದುವರೆಗೂ 11 ಬಾರಿ ಕಾಂಗ್ರೆಸ್‌ ಮತ್ತು 3 ಬಾರಿ ಬಿಜೆಪಿ ಜಯ ಗಳಿಸಿವೆ.

Advertisement

ಲಕ್ಷದ್ವೀಪ: ಲಕ್ಷದ್ವೀಪ ಕ್ಷೇತ್ರದಲ್ಲಿ ಕೇವಲ 47 ಸಾವಿರ ಮತದಾರರಿದ್ದಾರೆ. ಇಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೊಹಮ್ಮದ್‌ ಹಮದುಲ್ಲಾ ಸಯೀದ್‌ ವಿರುದ್ಧ ಎನ್‌ಸಿಪಿಯ ಮೊಹಮ್ಮದ್‌ ಫೈಜಲ್‌ ಪದ್ದಿಪ್ಪುರ ಜಯಗಳಿಸಿದ್ದರು. ಈ ಬಾರಿ ಎನ್‌ಸಿಪಿ (ಶರದ್‌ ಬಣ)ಯಿಂದ ಹಾಲಿ ಸಂಸದ ಪದ್ದಿಪ್ಪುರಗೆ ಟಿಕೆಟ್‌ ನೀಡಲಾಗಿದೆ. ಎನ್‌ಡಿಎ ಮಿತ್ರ ಪಕ್ಷ ಎನ್‌ಸಿಪಿ (ಅಜಿತ್‌ ಬಣ)ಗೆ ಈ ಕ್ಷೇತ್ರ ಬಿಟ್ಟುಕೊಡಲಾಗಿದೆ. ಯೂಸೂಫ್ ಟಿ.ಪಿ. ಅವರಿಗೆ ಪಕ್ಷ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ಸಯೀದ್‌ ಅವರಿಗೆ ಮತ್ತೂಮ್ಮೆ ಟಿಕೆಟ್‌ ನೀಡಲಾಗಿದೆ. ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಚಂಡೀಗಢ: ಚಂಡೀಗಢವು ಪಂಜಾಬ್‌ ಮತ್ತು ಹರಿಯಾಣ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಹಿಂದೂ ಧರ್ಮದ ಮತದಾರರೇ ನಿರ್ಣಾಯಕರು. ಇಲ್ಲಿಯವರೆಗೂ 6.47 ಮತದಾರರು ನೋಂದಾ ಯಿತರಾಗಿದ್ದಾರೆ. ಅಲ್ಲದೇ 30ರಿಂದ 39 ವರ್ಷ ವಯಸ್ಸಿನ ಮತದಾರರೇ ಅತ್ಯಧಿಕ ಅಂದರೆ 1.62 ಲಕ್ಷ ಜನರಿದ್ದಾರೆ. ಬಿಜೆಪಿ ನಾಯಕಿ ಕಿರಣ್‌ ಖೇರ್‌ ಇಲ್ಲಿನ ಹಾಲಿ ಸಂಸದರಾಗಿದ್ದಾರೆ. ಕ್ಷೇತ್ರದ ಒಟ್ಟು ಮತದಾರರ ಪೈಕಿ ಶೇ.80ರಷ್ಟು ಹಿಂದೂಗಳಿದ್ದಾರೆ. ಸಿಕ್ಖರು ಶೇ.15ರಷ್ಟಿದ್ದಾರೆ. ಅಲ್ಲದೇ ಎಸ್‌ಸಿ ಮತ್ತು ಎಸ್‌ಟಿ ಮತದಾರರು ಶೇ.18.9ರಷ್ಟಿದ್ದಾರೆ.
1967ರಲ್ಲಿ ಚಂಡೀಗಢ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಲೋಕಸಭಾ ಚುನಾವಣೆಗಳಲ್ಲಿ ಇದುವರೆಗೂ ಬಿಜೆಪಿ 4 ಬಾರಿ ಗೆಲುವು ಸಾಧಿಸಿದೆ. ಅದೇ ರೀತಿ ಭಾರತೀಯ ಜನಸಂಘ, ಜನತಾ ದಳ ಹಾಗೂ ಜನತಾ ಪಕ್ಷ ತಲಾ ಒಂದು ಬಾರಿ ಜಯ ದಾಖಲಿಸಿದೆ.

2024 ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮನೀಶ್‌ ತಿವಾರಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿ ಇನ್ನು ಅಂತಿಮಗೊಂಡಿಲ್ಲ. ಸತತ ಎರಡು ಅವಧಿಗೆ ಬಿಜೆಪಿ ಸಂಸದರಾಗಿರುವ ಕಿರಣ್‌ ಖೇರ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದು, ಸಂಜಯ್‌ ಟಂಡನ್‌ ಅವರನ್ನು ಕಣಕ್ಕಿಳಿಸಿದೆ.

ದಾಮನ್‌ ಮತ್ತು ಡಿಯು: ದಾಮನ್‌ ಮತ್ತು ಡಿಯು ಕ್ಷೇತ್ರದಲ್ಲಿ ಒಟ್ಟು 90,000 ಮತದಾರರಿದ್ದಾರೆ. ಗುಜರಾತ್‌ ಸಮೀಪದಲ್ಲಿ ಈ ದ್ವೀಪ ಇರುವುದರಿಂದ ಗುಜರಾ ತಿಗಳಲ್ಲಿ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೇತನ್‌ ಪಟೇಲ್‌ ಅವರ ವಿರುದ್ಧ ಬಿಜೆಪಿಯ ಲಾಲುಬಾಯ್‌ ಪಟೇಲ್‌ ಭರ್ಜರಿ ಜಯಗಳಿಸಿದ್ದರು. ಈ ಬಾರಿಯೂ ಮೂರು ಅವಧಿಯ ಬಿಜೆಪಿ ಸಂಸದ ಲಾಲುಬಾಯ್‌ ಪಟೇಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಮತ್ತೂಮ್ಮೆ ಕೇತನ್‌ ಪಟೇಲ್‌ ಅವರಿಗೆ ಅವಕಾಶ ನೀಡಿದೆ.

ದಾದರ್‌ ಮತ್ತು ನಗರ ಹವೇಲಿ: ದಾದರ್‌ ಮತ್ತು ನಗರ ಹವೇಲಿಯು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಒಟ್ಟು 2.5 ಲಕ್ಷ ನೋಂದಾಯಿತ ಮತದಾರರಿದ್ದಾರೆ. ಇಲ್ಲಿ ದಲಿತ ಮತಗಳೇ ನಿರ್ಣಾಯಕವಾಗಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಾತುಭಾಯ್‌ ಪಟೇಲ್‌ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಮೋಹನ್‌ಬಾಯ್‌ ದೇಲ್ಕರ್‌ ಜಯಗಳಿಸಿದ್ದರು. ಆದರೆ ದೇಲ್ಕರ್‌ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಮಹೇಶ್‌ ಗವಿತ್‌ ಅವರ ವಿರುದ್ಧ ಶಿವಸೇನೆಯ ಕಲಾಬೆನ್‌ ದೇಲ್ಕರ್‌ ಭರ್ಜರಿ ಜಯ ಸಾಧಿಸಿದ್ದರು. ಇದೀಗ ಕಲಾಬೆನ್‌ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರಿಗೆ ಪಕ್ಷ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಅಜಿತ್‌ ರಾಮ್‌ಜೀ ಭಾಯ್‌ ಮಹ್ಲಾ ಅವರನ್ನು ಕಣಕ್ಕಿಳಿಸಿದೆ. ಮತ್ತೂಮ್ಮೆ ಕಲಾಬೆನ್‌ ದೇಲ್ಕರ್‌ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಯಾವಾಗ ಮತದಾನ?
– ಅಂಡಮಾನ್‌ ಮತ್ತು ನಿಕೋಬಾರ್‌……………….ಎ.19(ಮೊದಲ ಹಂತ)
– ಲಕ್ಷದ್ವೀಪ…………………………………………………………………. ಎ.19(ಮೊದಲ ಹಂತ)
– ಪುದುಚೇರಿ……………………………………………………………….ಎ.19(ಮೊದಲ ಹಂತ)
– ದಾಮನ್‌ ಮತ್ತು ಡಿಯು……………………………………………….ಮೇ 7(ಹಂತ 3)
– ದಾದರ್‌ ಮತ್ತು ನಗರ ಹವೇಲಿ…………………………………….ಮೇ 7(ಹಂತ 3)
– ಚಂಡೀಗಢ……………………………………………………………………………ಜೂ.1(ಹಂತ 7)

ಸಂತೋಷ್‌ ಪಿ.ಯು.

Advertisement

Udayavani is now on Telegram. Click here to join our channel and stay updated with the latest news.

Next