ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂಚಾಲಕತ್ವದಲ್ಲಿ ರಚಿಸಿರುವ ಬಿಜೆಪಿಯ ಚುನಾವಣ ನಿರ್ವಹಣ ಸಮಿತಿಯ ಮೊದಲ ಸಭೆ ಸೋಮವಾರ ನಡೆದಿದ್ದು, ಸಿದ್ಧತೆ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.
ಸುಮಾರು ನಾಲ್ಕು ಗಂಟೆ ಕಾಲ ನಡೆದ ಈ ಸಭೆಯಲ್ಲಿ ಚುನಾವಣೆಯ ತಯಾರಿ, ಜಾಹೀರಾತು, ಸಾಮಾಜಿಕ ಜಾಲತಾಣದ ಬಳಕೆ, ಅಭಿಯಾನ, ಬೂತ್ ಸಮಿತಿಗಳ ಕ್ರಿಯಾಶೀಲತೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿಯಲ್ಲಿ ಒಂದು ಪದ್ಧತಿ ಇದೆ. ಅದರ ಪ್ರಕಾರ ಈ ಸಮಿತಿ ರಚನೆಯಾಗಿದೆ. ಚುನಾವಣೆ ಸಿದ್ಧತೆ ವಿವಿಧ ಹಂತದಲ್ಲಿ ಬಿರುಸಾಗಿಯೇ ಸಾಗುತ್ತಿದೆ. ಪ್ರಣಾಳಿಕೆ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮಂಡ್ಯದಲ್ಲಿ ಈ ಹಿಂದೆ ಬಿಜೆಪಿ ದುರ್ಬಲವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಬಳಿಕ ನಮಗೆ ಇನ್ನಷ್ಟು ಶಕ್ತಿ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಹೊಣೆಗಾರರಲ್ಲ
ಪ್ರಧಾನಿ ನರೇಂದ್ರ ಮೋದಿಯವರಿಗೆ ಫೈಟರ್ ರವಿ ಸ್ವಾಗತ ಕೋರಿರುವ ವಿಚಾರದಲ್ಲಿ ಲೋಪವಾಗಿದೆ. ಮೋದಿಯವರಿಗೆ ಸ್ವಾಗತ ಕೋರುವ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಬಂತೋ ಗೊತ್ತಿಲ್ಲ. ಫೈಟರ್ ರವಿ ಯಾರು ಎಂಬುದು ಪ್ರಧಾನಿಯವರಿಗೆ ಗೊತ್ತಿಲ್ಲ . ಇದಕ್ಕೆ ಪ್ರಧಾನಿ ಜವಾಬ್ದಾರರಲ್ಲ ಎಂದರು.