Advertisement

ಕಾಂಗ್ರೆಸ್‌ನಿಂದ ಬಿಜೆಪಿ ವಿರುದ್ಧ ಗೂಂಡಾಗಿರಿ: ಶೋಭಾ ಆರೋಪ

06:30 AM Dec 25, 2017 | |

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಗೂಂಡಾಗಿರಿ ಮತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೃತ್ಯಗಳು ಹೆಚ್ಚಾಗುತ್ತಿದ್ದು, ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಕಾಂಗ್ರೆಸ್‌ ಈ ಕೆಲಸ ಮಾಡುತ್ತಿದೆ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಗೂಂಡಾ ಕಾಯ್ದೆಯಡಿ ಮೊಕದ್ದಮೆ ಎದುರಿಸುತ್ತಿರುವ ವ್ಯಕ್ತಿಗಳು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಹಲ್ಲೆ ನಡೆಸುತ್ತಿದ್ದಾರೆ. ಕೊಪ್ಪದಲ್ಲಿ ಶನಿವಾರ ಸಂಜೆ ಬಿಜೆಪಿ ಕಚೇರಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಇದರಲ್ಲಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷರೂ ಶಾಮೀಲಾಗಿದ್ದಾರೆ ಎಂದು ದೂರಿದರು.

ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಾಸಕ ಡಿ.ಎನ್‌.ಜೀವರಾಜ್‌ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಅತ್ಯಾಚಾರಿಗಳ ಪುರುಷತ್ವ ಹರಣ ಮಾಡಿ: ಶೋಭಾ
ವಿಜಯಪುರ:
“ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗಳಿಗೆ ಪುರುಷತ್ವ ಹರಣ ಮಾಡಬೇಕು ಹಾಗೂ ಗಲ್ಲಿಗೇರಿಸಬೇಕು’ ಎಂದು ಸಂಸದೆ ಶೋಭಾ ಕರದ್ಲಾಂಜೆ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಎಸಗಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಈ ಕೀಚಕರ ಪುರುಷತ್ವ ಹರಣ ಮಾಡಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರದಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಸಂತ್ರಸ್ತೆ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರ ನೌಕರಿ ಒದಗಿಸಬೇಕು ಎಂದು ಒತ್ತಾಯಿಸಿದ ಅವರು ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

Advertisement

ಬಿಜೆಪಿ ಕಾರ್ಯಕರ್ತರ ಮಧ್ಯೆಮಾರಾಮಾರಿ 
ಕೊಪ್ಪ
: ವಾಟ್ಸ್‌ ಆ್ಯಪ್‌ ಸಂದೇಶವೊಂದು ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ಸೃಷ್ಟಿಸಿ ಪರಸ್ಪರರು ಹೊಡೆದಾಡಿ ಕಲ್ಲು ತೂರಾಟ ನಡೆಸಿದ ಘಟನೆ ಶನಿವಾರ ರಾತ್ರಿ ಕೊಪ್ಪದಲ್ಲಿ ನಡೆದಿದೆ.

ಘಟನೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆ ತಡೆಯಲು ಪೊಲೀಸರು ಲಾಠಿ ಚಾರ್ಚ್‌ ಮಾಡಿದ್ದಾರೆ. ಘಟನೆಯಲ್ಲಿ ಬಿಜೆಪಿಯ ಇತಿಹಾಸ್‌, ರಾಕೇಶ್‌ ಹಾಗೂ ಕಾಂಗ್ರೆಸ್‌ನ ಚೇತನ್‌ ಗಾಯಗೊಂಡಿದ್ದು ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ .

ಬಿಜೆಪಿ ಕಾರ್ಯಕರ್ತ ರಾಕೇಶ್‌ ವಾಟ್ಸ್‌ ಆ್ಯಪ್‌ನಲ್ಲಿ ರವಾನಿಸಿದ ಸಂದೇಶವೊಂದನ್ನು ತಪ್ಪಾಗಿ ಅರ್ಥೈಸಿಕೊಂಡ ಕಾಂಗ್ರೆಸ್‌ ಮುಖಂಡರು ಪಟ್ಟಣದ ಬಿಜೆಪಿ ಕಚೇರಿಗೆ ನುಗ್ಗಿ ರಾಕೇಶ್‌ನನ್ನು ಹೊರಗೆಳೆದು ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್‌ನವರು ತನ್ನ ಕೊಲೆಗೆ ಯತ್ನಿಸಿದ್ದಾರೆಂದು ರಾಕೇಶ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next