ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನವಾದಂತೆ ಕಂಡುಬರುತ್ತಿದೆಯಾದರೂ ಅಸಮಾಧಾನ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಸ್ತವ ಪರಿಸ್ಥಿತಿ ಕುರಿತಂತೆ ವರದಿ ತರಿಸಿಕೊಳ್ಳಲು ಪಕ್ಷದ ಹೈಕಮಾಂಡ್ ಮುಂದಾಗಿದೆ.
ಈ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಜಂಟಿ ಕಾರ್ಯದರ್ಶಿ ಶಿವಪ್ರಕಾಶ್ ಯಾದವ್ ಅವರನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದು, ಅವರು ಭಾನುವಾರದಿಂದಲೇ ತಮ್ಮ ಕೆಲಸ ಆರಂಭಿಸಿದ್ದಾರೆ.
ಇದಕ್ಕೆ ಕಾರಣ ರಾಜ್ಯ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಡುವೆ ಮುಂದುವರಿದಿರುವ ಮುಸುಕಿನ ಗುದ್ದಾಟ.
ಮೇಲ್ನೋಟಕ್ಕೆ ಇವರಿಬ್ಬರ ಅಸಮಾಧಾನ ಕಾಣಿಸಿಕೊಳ್ಳುತ್ತಿಲ್ಲವಾದರೂ ಆಂತರಿಕವಾಗಿ ಅದು ಪಕ್ಷ ಸಂಘಟನೆಗೆ ತೊಡಕುಂಟುಮಾಡುತ್ತಿದೆ ಎಂಬ ಮಾಹಿತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಲುಪಿದೆ. ಈ ಕಾರಣಕ್ಕಾಗಿ ವಾಸ್ತವ ಪರಿಸ್ಥಿತಿ ಕುರಿತಂತೆ ವರದಿ ತರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಏನಿದು ವರದಿ?: 2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಸಂಘಟನಾತ್ಮಕ ಪರಿಸ್ಥಿತಿ ಬಗ್ಗೆ ವರದಿ ತರಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿತ್ತು. ಅದರಂತೆ ಈ ಕೆಲಸವನ್ನು ದಕ್ಷಿಣ ಭಾರತದ ಜವಾಬ್ದಾರಿ ಹೊತ್ತಿರುವ ಬಿ.ಎಲ್.ಸಂತೋಷ್ ಅವರಿಗೆ ವಹಿಸಲಾಗಿತ್ತು. ಆದರೆ, ಈ ಮಧ್ಯೆ ರಾಜ್ಯ ಘಟಕದಲ್ಲಿ ಯಡಿಯೂರಪ್ಪ ಮತ್ತು ಸಂತೋಷ್ ಬಣದ ನಡುವೆ ಅಸಮಾಧಾನ ಮೂಡಿದ್ದು,
ಸಂತೋಷ್ ಅವರು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಗಮನಕ್ಕೆ ತಾರದೆ ಕೇಂದ್ರೀಯ ಸಮಿತಿಗೆ ವರದಿ ನೀಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ನಿಷ್ಪಕ್ಷಪಾತ ವರದಿ ತರಿಸಿಕೊಳ್ಳಲು ಮುಂದಾದ ಪಕ್ಷದ ಕೇಂದ್ರೀಯ ಘಟಕ ಎಲ್ಲರೂ ಒಪ್ಪುವ ರೀತಿಯಲ್ಲಿ ವರದಿ ತರಿಸಿಕೊಳ್ಳಲು ನಿರ್ಧರಿಸಿದ್ದು, ಈ ಜವಾಬ್ದಾರಿಯನ್ನು ಶಿವಪ್ರಕಾಶ್ ಯಾದವ್
ಅವರಿಗೆ ವಹಿಸಿದೆ ಎನ್ನಲಾಗಿದೆ.
ಅದರಂತೆ ಶಿವಪ್ರಕಾಶ್ ಭಾನುವಾರ ಮಂಗಳೂರು ವಿಭಾಗದ ಮುಖಂಡ ರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಸೋಮವಾರ (ಅ.23) ಮೈಸೂರು ವಿಭಾಗ, ಮಂಗಳವಾರ (ಅ.24) ಬೆಂಗಳೂರು ವಿಭಾಗದ ಪ್ರಮುಖರ ಸಭೆ ಕರೆದು ಮಾಹಿತಿ ಸಂಗ್ರಹಿಸಲಿದ್ದಾರೆ. ಬಳಿಕ ರಾಜ್ಯ ಘಟಕದ ವಾಸ್ತವಿಕ ಚಿತ್ರಣ, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಕೇಂದ್ರ ಸಮಿತಿಗೆ ವರದಿ ಸಲ್ಲಿಸಲಿದ್ದಾರೆ.