ಚಿಂಚೋಳಿ: ತಾಲೂಕಿನ ಪಂಗರಗಾ ಗ್ರಾಮದ ಧಾರ್ಮಿಕ ಕ್ಷೇತ್ರ ಸೋನ್ಯಾಲಗಿರಿಯಲ್ಲಿ ಕಳೆದ ಒಂಭತ್ತು ತಿಂಗಳಿಂದ ಮೌನ ತಪಸ್ಸು ಮಾಡಿದ ಪೂಜ್ಯ ಸಂತ ಪರಮೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಶುಕ್ರವಾರ 24ನೇ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಿತು.
ಚಿತ್ತಾಪುರ ತಾಲೂಕಿನ ಬೆಡಸೂರ ತಾಂಡಾದ ಹರಿಶ್ಚಂದ್ರ, ಘಮಣಾದೇವಿ ಉದರದಲ್ಲಿ 1961 ಮಾರ್ಚ್ 2ರಂದು ಜನಿಸಿದ ಪರಮೇಶ್ವರ ಮಹಾರಾಜರು ಬಾಲ್ಯದಲ್ಲೇ ಜಡ ಸಂಸಾರದ ವ್ಯಾಮೋಹ ತೊರೆದು ಕಾಡಿಗೆ ಹೋಗಿ ಕಠಿಣ ತಪಸ್ಸು ಆಚರಿಸಿದರು.
ನಂತರ ನೀರು ಮತ್ತು ಹಾಲನ್ನು ಮಾತ್ರ ಸೇವಿಸುತ್ತಾ ಪರಶಿವನ ಧ್ಯಾನಾಸ್ಥರಾಗಿ ತಮ್ಮ ಬಳಿಗೆ ಬರುವ ಭಕ್ತಾದಿಗಳ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದಾರೆ. ಪೂಜ್ಯ ಪರ್ವತಲಿಂಗ ಪರಮೇಶ್ವರ ಮಹಾರಾಜರ ನೇತೃತ್ವದಲ್ಲಿ ಶುಕ್ರವಾರ ಮಹಾಶಿವರಾತ್ರಿ ಅಮವಾಸ್ಯೆ ದಿವಸ ಸೋನ್ಯಾಲಗಿರಿಯಲ್ಲಿ 251 ದಂಪತಿಗಳಿಂದ ಸೋಮಾಂತಕ ಚಂಡಿಹೋಮ ಯಜ್ಞ ಪೂಜೆ ನಡೆಯಿತು.
ಶಾಸಕ ಡಾ| ಉಮೇಶ ಜಾಧವ್, ರವಿರಾಜ ಕೊರವಿ, ದತ್ತಾತ್ರೇಯ ಕುಲಕರ್ಣಿ, ಅಶೋಕ ಚವ್ಹಾಣ ಚಂದಾಪುರ, ಬಾಬು ಜಾಧವ್, ಪ್ರೇಮಸಿಂಗ ಚವ್ಹಾಣ, ಶಂಕರ ಜಾಧವ್, ರವಿ ರಾಠೊಡ, ಥಾವರು ರಾಠೊಡ, ದಶರಥ ಜಾಧವ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಇಂದು ಸಾಮೂಹಿಕ ವಿವಾಹ: ಫೆ.25ರಂದು ಬೆಳಗ್ಗೆ 11:30ಗಂಟೆಗೆ ಸಾಮೂಹಿಕ ವಿವಾಹ, ಜನ ಜಾಗೃತಿ ಧರ್ಮ ಸಭೆ ನಡೆಯಲಿದೆ. ಶ್ರೀ ಪರಮೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸುವರು. ಧರ್ಮ ಸಭೆಯಲ್ಲಿ ವಿವಿಧ ಜಗದ್ಗುರುಗಳು, ಸಚಿವರಾದ ಡಿ.ಕೆ ಶಿವಕುಮಾರ, ಈಶ್ವರ ಖಂಡ್ರೆ, ಡಾ| ಶರಣಪ್ರಕಾಶ ಪಾಟೀಲ, ಕರ್ನಾಟಕ ಮೂಲ ಸೌಕರ್ಯಗಳ ನಿಗಮ ಅಧ್ಯಕ್ಷ ರಾಜಶೇಖರ ಪಾಟೀಲ ಭಾಗವಹಿಸಲಿದ್ದಾರೆ.