ಮಂಗಳೂರು: ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಥಬೀದಿಯ ಶ್ರೀ ವೆಂಕಟರಮಣ ದೇಗುಲದ ಆಚಾರ್ಯರ ಮಠ ವಠಾರದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಅ. 8ರಿಂದ 14ರ ವರೆಗೆ ನಡೆಯಲಿದೆ ಎಂದು ಶ್ರೀ ವೆಂಕಟರಮಣ ದೇಗುಲದ ತಂತ್ರಿ ಹಾಗೂ ಸಮಿತಿಯ ಟ್ರಸ್ಟಿ ಡಾ| ಪಂಡಿತ್ ನರಸಿಂಹಾಚಾರ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ. 9ರಂದು ಬೆಳಗ್ಗೆ 7ಕ್ಕೆ ಶ್ರೀ ಶಾರದಾ ವಿಗ್ರಹಏದ ಪ್ರತಿಷ್ಠಾಪನೆ ನಡೆಯಲಿದೆ. ಅ. 13ರ ವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಅ. 13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ, ಬೆ. 10ಕ್ಕೆ ವಿದ್ಯಾರಂಭ, ಸಂಜೆ 6ಕ್ಕೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ.
ಅ. 14ರಂದು ಸಂಜೆ 5ಕ್ಕೆ ಶಾರದಾ ಮಾತೆಗೆ ಪೂರ್ಣಾಲಂಕಾರ, ರಾತ್ರಿ ವಿಸರ್ಜನೆ ಶೋಭಾಯಾತ್ರೆ ನಡೆಯಲಿದೆ. ಅ. 10ರಂದು ರಾತ್ರಿ ದುರ್ಗಾ ನಮಸ್ಕಾರ ಸೇವೆ, ಸಾರ್ವಜನಿಕ ಅನ್ನ ಸಂತರ್ಪಣೆ ಇದೆ ಎಂದರು. ವಿಸರ್ಜನೆ ಯಾತ್ರೆಯಲ್ಲಿ ಡಿಜೆ ಅಥವಾ ನಾಸಿಕ್ ಬ್ಯಾಂಡ್ ಅವಕಾಶವಿಲ್ಲ ಎಂದರು. ಟ್ರಸ್ಟಿಗಳಾದ ದತ್ತಾತ್ರೇಯ ಭಟ್, ಗಣೇಶ್ ಬಾಳಿಗ, ಮತ್ತಿತರರು ಭಾಗವಹಿಸಿದ್ದರು.
ತಿರುಪತಿ ಲಡ್ಡು ಪ್ರಕರಣ: ಸಾಮೂಹಿಕ ಪ್ರಾರ್ಥನೆ
ಶಾರದಾ ಮಹೋತ್ಸವದ 100ನೇ ಸಮಾರಂಭದಲ್ಲಿ ತಿರುಪತಿಯಿಂದ ಲಡ್ಡು ತಂದು ವಿತರಿಸಲಾಗಿತ್ತು. ಈಗ ಪ್ರಸಾದ ಕಲಬೆರಕೆಯಾದ ಸಂಗತಿ ಹೊರಬಿದ್ದ ಹಿನ್ನೆಲೆಯಲ್ಲಿ ಶಾರದಾ ಮಾತೆಯ ಪ್ರತಿಷ್ಠೆ ವೇಳೆ ಪ್ರಾಯಶ್ಚಿತ ರೂಪದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದಾಗಿ ಡಾ| ಪಂಡಿತ್ ನರಸಿಂಹಾಚಾರ್ಯ ಹೇಳಿದರು.