ಮಂಡ್ಯ: ಮಹಾ ಶಿವರಾತ್ರಿ ಅಂಗವಾಗಿ ಗುರುವಾರ ಮುಂಜಾನೆಯಿಂದಲೇ ಭಕ್ತರು ಹಾಗೂ ಸಾರ್ವಜನಿಕರು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜೆ: ಮಂಡ್ಯದ ನಗರದ ಶಂಕರಪುರ ಬಡಾವಣೆಯಲ್ಲಿರುವ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಗಂಗಾಧರೇಶ್ವರ ಶ್ರೀ ಪಾರ್ವತಿ ಪರಿವಾರ ದೇವತೆಗಳ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆದಿಚುಂಚನಗಿರಿ ಶಾಖಾ ಮಠದ ಶ್ರೀಪುರುಷೋತ್ತಮಾ ನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಸಾಂಗೋಪ ಸಾಂಗವಾಗಿ ನಡೆದವು. ನಂತರ ಮಾತನಾಡಿದ ಶ್ರೀಗಳು, ಮಹಾಶಿವನ ಶಿವರಾತ್ರಿ ಹಬ್ಬವನ್ನು ನಮ್ಮ ಶಾಖಾ ಮಠದ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ವಿಶ್ವ ಕೋವಿಡ್‌ನಿಂದ ಪಾರಾಗಲಿ, ಎಲ್ಲ ಪ್ರಜೆಗಳೂ ಸುಖ, ಸಂತೋಷದಿಂದ ಇರುವಂತೆ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಭಗವಂತ ನೆಮ್ಮದಿ, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ಕೊಟ್ಟು ಕಾಪಾಡುವಂತೆ ಪ್ರಾರ್ಥಿಸಿ ಸೇವೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಪ್ರಧಾನ ಅರ್ಚಕರಾದ ಮಂಜುನಾಥ್, ಪ್ರಭು, ರಾಘವೇಂದ್ರ, ಪುನೀತ್, ತಾಂಡವೇಶ್, ಪ್ರಮೋದ್ ಮತ್ತಿತರರಿದ್ದರು. ಇದೇ ವೇಳೆ ಭಕ್ತಾದಿ ಗಳಿಗೆ ಪ್ರಸಾದ ವಿತರಿಸಲಾಯಿತು. ಅರಕೇಶ್ವರನಿಗೆ ಭಕ್ತರ ದಂಡು: ಅರಕೇಶ್ವರ ದೇವಾಲಯಕ್ಕೆ ಲಗ್ಗೆ ಇಟ್ಟ ಭಕ್ತಾ ದಿಗಳು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ: ನಗರದ ಸ್ವರ್ಣಸಂದ್ರ, ಹೊಸಹಳ್ಳಿ ಹಾಗೂ ಚಾಮುಂಡೇಶ್ವರಿ ನಗರದ ಶನೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತಾ ದಿಗಳು ಆಗಮಿಸಿ ದೇವರ ದರ್ಶನ ಪಡೆದರು. ವಿಶೇಷ ಅಲಂಕಾರ: ನಗರದ ಅರಕೇಶ್ವರಸ್ವಾಮಿ, ಶನೇಶ್ವರಸ್ವಾಮಿ, ಕಲ್ಲಹಳ್ಳಿ ಆಂಜನೇಯಸ್ವಾಮಿ, ಲಕ್ಷ್ಮೀ ಜನಾರ್ಧನಸ್ವಾಮಿ, ಶ್ರೀನಿವಾಸ, ವೆಂಕಟ ರಮಣಸ್ವಾಮಿ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಗುರುವಾರ ರಾತ್ರಿ ವಿವಿಧ ದೇಗುಲಗಳಲ್ಲಿ ಜಾಗರಣೆ ನಡೆಯಿತು.