ಶಿವಮೊಗ್ಗ: ಸ್ಮಾರ್ಟ್ ಸಿಟಿ ಮತ್ತು ಅಮೃತ ಯೋಜನೆ ಅಡಿ ಶರವೇಗದಲ್ಲಿ ಸಾಗುತ್ತಿದ್ದ ಕಾಮಗಾರಿಗಳಿಗೆ ಕೊರೊನಾ ಬ್ರೇಕ್ ಹಾಕಿದೆ. ಲಾಕ್ ಡೌನ್ ಘೋಷಣೆ ಆದಾಗಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದೇ ಆರಂಭಗೊಂಡ ಕಾಮಗಾರಿಗಳಿಗೆ ಮತ್ತೆ ಗ್ರಹಣ ಹಿಡಿದಿದೆ.
2019ರ ಅಕ್ಟೋಬರ್‌ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ವೇಗ ಸಿಕ್ಕಿದ್ದು, ಕಳೆದ ಐದೂವರೆ ತಿಂಗಳಲ್ಲಿ ಶೇ.30ರಷ್ಟು ಪ್ರಗತಿ ಸಾಧಿಸಲಾಗಿದೆ. 307 ಕೋಟಿ ರೂ. ಕಾಮಗಾರಿಯಲ್ಲಿ ಅಂದಾಜು 115 ಕೋಟಿ ರೂ. ಖರ್ಚಾಗಿದೆ. ಇದು ಹೀಗೆಯೇ ಮುಂದುವರಿದಿದ್ದರೆ ಇಷ್ಟೊತ್ತಿಗಾಗಲೇ ಅಂತಿಮ ಹಂತದಲ್ಲಿರುವ ಪಾರ್ಕ್, ಕನ್ಸರ್ವೆನ್ಸಿ ಕಾಮಗಾರಿಗಳೂ ಪೂರ್ಣಗೊಂಡಿರುತ್ತಿದ್ದವು. ಆದರೆ, ದಿಢೀರ್ ಆಗಿ ಎದುರಾದ ಆಪತ್ತಿನಿಂದಾಗಿ ಕಳೆದ 15 ದಿನಗಳಿಂದ ಸ್ಮಾರ್ಟ್ ಸಿಟಿ, ಅಮೃತ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆಲಸಗಳು ಪೂರ್ಣ ಸ್ತಬ್ಧವಾಗಿವೆ.
ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಮೆಸ್ಕಾಂ ಯುಜಿ ಕೇಬಲ್, 24/7 ನೀರು, ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೀಗ ಎಲ್ಲ ಕಾರ್ಯಗಳು ಅರ್ಧಂಬರ್ಧ ಆಗಿದ್ದು, ಬಡಾವಣೆಗಳಲ್ಲಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇವೆಲ್ಲವುಗಳಿಂದಾಗಿ ಜನ ಓಡಾಡಲೂ ಸಾಧ್ಯವಾಗುತ್ತಿಲ್ಲ. ರಾಜ್ಯದ ವಿವಿಧ ಜಿಲ್ಲೆ ಮತ್ತು ಉತ್ತರ ಭಾರತದಿಂದ ಸಾಕಷ್ಟು ಜನ ಕೂಲಿಗಾಗಿ ಆಗಮಿಸಿದ್ದರು. ಆದರೆ, ಕೊರೊನಾದಿಂದಾಗಿ ಎಲ್ಲರೂ ತವರಿಗೆ ವಾಪಸ್ ಆಗಿದ್ದಾರೆ. ಒಂದುವೇಳೆ, ಕೊರೊನಾ ಪೂರ್ಣಪ್ರಮಾಣದಲ್ಲಿ ಕಡಿಮೆ ಆದ ಬಳಿಕವೂ ಕಾರ್ಮಿಕರ ಹುಡುಕಾಟಕ್ಕೆ ಕನಿಷ್ಠ ಒಂದು ತಿಂಗಳಾದರೂ ಬೇಕು. ಅಷ್ಟೊತ್ತಿಗೆ ಮಳೆಗಾಲ ಬರುವುದರಿಂದ ಎಲ್ಲ ಕಾಮಗಾರಿಗಳು ಅಲ್ಲಿಗೆ ನಿಲ್ಲಲಿವೆ. ಹೀಗಾಗಿ ಕೊವಿಡ್ -19ನಿಂದಾಗಿ ಪ್ರಗತಿ ಕಾಮಗಾರಿಗಳು ನಾಲ್ಕೈದು ತಿಂಗಳು ಮುಂದೂಡಲ್ಪಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿಯ ತವರು ಕ್ಷೇತ್ರವಾದ ಶಿವಮೊಗ್ಗದಲ್ಲಿ 2017ರಿಂದ ಕುಟುಂತ್ತ ಸಾಗಿದ್ದ ಕೆಲಸಗಳಿಗೆ ವೇಗ ಸಿಕ್ಕಿತ್ತು. ನಿರಂತರ ಪ್ರಗತಿ ಪರಿಶೀಲನೆಯಿಂದಾಗಿ ವಿವಿಧೆಡೆ ಕೆಲಸಗಳು ನಡೆಯುತ್ತಿದ್ದವು. ಆದರೆ, ದಿಢೀರ್ ಆಗಿ ಬಂದೊದಗಿರುವ ವಿಪತ್ತು ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ.